ಕೇರಳದಲ್ಲಿ ವರುಣನ ಅಬ್ಬರ: ಮಹಾಮಳೆಗೆ ಸಿಲುಕಿದ ಕರ್ನಾಟಕ ರಾಜ್ಯ ಸಾರಿಗೆ ಬಸ್

Update: 2018-08-15 14:49 GMT

ಬೆಂಗಳೂರು, ಆ. 15: ಕೇರಳ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಅಬ್ಬರದ ಮಳೆ ಹಾಗೂ ನೆರೆಯ ನೀರಿಗೆ ಕೆಎಸ್ಸಾರ್ಟಿಸಿಯ ಐರಾವತ ಬಸ್‌ವೊಂದು ಸಿಲುಕಿದ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಕೇರಳ ರಾಜ್ಯಕ್ಕೆ ಸಾರಿಗೆ ಬಸ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕೇರಳದ ಕಣ್ಣೂರು, ಕ್ಯಾಲಿಕಟ್, ಕಾಸರಗೋಡಿಗೆ ಕೆಎಸ್ಸಾರ್ಟಿಸಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಭಾರೀ ಮಳೆಯಿಂದಾಗಿ ನೀರಿನಲ್ಲಿ ಕೆಎಸ್ಸಾರ್ಟಿಸಿ ಐರಾವತ ಬಸ್ಸೊಂದು ಸುಲ್ತಾನ್ ಬತೇರಿಯಲ್ಲಿ ಸಿಲುಕಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಬ್ಬರದ ಮಳೆ ಹಾಗೂ ಅತಿವೃಷ್ಟಿ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರ ಹಾಗೂ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಕೇರಳ ರಾಜ್ಯದ ವಿವಿಧೆಡೆಗೆ ತೆರಳಬೇಕಿದ್ದ ಕೆಎಸ್ಸಾರ್ಟಿಸಿ ಬಸ್ ಸೇವೆಯನ್ನು ಮಳೆ ಹಾಗೂ ನೆರೆ ನಿಲ್ಲುವವರೆಗೂ ನಿಲ್ಲಿಸಲಾಗಿದೆ. ಕೆಎಸ್ಸಾರ್ಟಿಸಿ ಮುಂಗಡ ಟಿಕೆಟ್ ಕಾಯ್ದಿರಿಸಿದವರಿಗೆ ಟಿಕೆಟ್ ಮೊತ್ತವನ್ನು ಹಿಂದಿರುಗಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News