ಆ.16ರಂದು ಕೆಂಪೇಗೌಡ ದಿನಾಚರಣೆ: 340ಕ್ಕೂ ಹೆಚ್ಚು ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ

Update: 2018-08-15 16:33 GMT

ಬೆಂಗಳೂರು, ಆ.15: ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಆ.16  ರಂದು ನಾಡಪ್ರಭು ಕೆಂಪೇಗೌಡ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ವೇದಿಕೆ ಸಿದ್ಧಗೊಂಡಿದ್ದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 340ಕ್ಕೂ ಹೆಚ್ಚು ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ವಿತರಿಸಲಿದ್ದಾರೆ.

ಗುರುವಾರ ಬೆಳಗ್ಗೆ 8ಕ್ಕೆ ಮೇಯರ್ ಸಂಪತ್‌ರಾಜ್ ಪಾಲಿಕೆ ಮುಂಭಾಗದಲ್ಲಿರುವ ನಾಡಪ್ರಭು ಕೆಂಪೇಗೌಡರು ಹಾಗೂ ವೀರನಾರಿ ಲಕ್ಷ್ಮಿದೇವಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕೆಂಪೇಗೌಡ ದಿನಾಚರಣೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ನಂತರ ಲಾಲ್‌ಬಾಗ್‌ನಲ್ಲಿರುವ ಗಡಿಗೋಪುರದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪೂಜೆ ಸಲ್ಲಿಸುವ ಮೂಲಕ ಕೆಂಪೇಗೌಡ ಜ್ಯೋತಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಲಾಲ್‌ಬಾಗ್ ಕೋರಮಂಗಲ, ಕೆಂಪಾಂಬುದಿ ಕೆರೆ ಹಾಗೂ ಮೇಕ್ರಿ ವೃತ್ತದಲ್ಲಿರುವ ನಾಲ್ಕು ಗಡಿಗೋಪುರಗಳ ಜತೆಗೆ ಮಾಗಡಿಯಲ್ಲಿರುವ ಕೆಂಪೇಗೌಡರ ಸಮಾಧಿಯಿಂದ ಏಕಕಾಲಕ್ಕೆ ಜ್ಯೋತಿಯಾತ್ರೆ ಆರಂಭವಾಗಲಿದೆ.

ಜ್ಯೋತಿಯಾತ್ರೆಯಲ್ಲಿ ವಿವಿಧ ಕಲಾತಂಡಗಳು, ಸ್ತಬ್ಧಚಿತ್ರ ಪ್ರದರ್ಶನಗಳು ಹೆಜ್ಜೆ ಹಾಕಲಿದ್ದು, ಸ್ಥಳೀಯ ಶಾಸಕರು ಮತ್ತು ಬಿಬಿಎಂಪಿ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 9ಕ್ಕೆ ಆರಂಭವಾಗಲಿರುವ ಜ್ಯೋತಿಯಾತ್ರೆ 11ರ ಸುಮಾರಿಗೆ ಪಾಲಿಕೆ ಕೇಂದ್ರ ಕಚೇರಿಗೆ ಆಗಮಿಸಲಿದ್ದು, ಜ್ಯೋತಿಯಾತ್ರೆಯನ್ನು ಮಹಾಪೌರ ಸಂಪತ್‌ರಾಜ್ ಬರಮಾಡಿಕೊಳ್ಳಲಿದ್ದಾರೆ. ಮಧ್ಯಾಹ್ನ 2ಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮೇಯರ್ ಸಂಪತ್‌ರಾಜ್ ಗಾಜಿನ ಮನೆಯಲ್ಲಿ ಉತ್ತಮ ಅಧಿಕಾರಿ ಮತ್ತು ನೌಕರರ ಪ್ರಶಸ್ತಿ ವಿತರಿಸಲಿದ್ದಾರೆ.

ಸಂಜೆ 6ಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 2018ನೆ ಸಾಲಿನ ಕೆಂಪೇಗೌಡ ಪ್ರಶಸ್ತಿ ವಿತರಿಸಲಿದ್ದಾರೆ. ರಾತ್ರಿ 8 ಗಂಟೆಗೆ ಪಾಲಿಕೆ ನೌಕರರ ಕಲಾಸಂಘದವರು ಶ್ರೀಕೃಷ್ಣ ಸಂಧಾನ ಪೌರಾಣಿಕ ನಾಟಕ ನಡೆಸಿಕೊಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News