ಅಮೆರಿಕದ ನೆಲದಲ್ಲಿ "ಮಹಿಷ ಮರ್ಧಿನಿ" ಯಕ್ಷಗಾನ ಬಯಲಾಟ

Update: 2018-08-16 13:21 GMT

ಹ್ಯೂಸ್ಟನ್,ಆ.16: ಪಣಂಬೂರು ವಾಸು ಐತಾಳ ಮತ್ತು ಬಳಗದವರಿಂದ ಟೆಕ್ಸಾಸ್ ನ ಹ್ಯೂಸ್ಟನ್ ನಲ್ಲಿ ಬಯಲಾಟವನ್ನು ನೆನಪಿಸುವ ವಿಶೇಷ ಯಕ್ಷಗಾನ "ಮಹಿಷ ಮರ್ಧಿನಿ" ಶ್ರೀ ಕೃಷ್ಣ ವೃಂದಾವನ ಮತ್ತು ಕನ್ನಡವೃಂದದ ಸಹಯೋಗದಲ್ಲಿ ನಡೆಯಿತು. ಅಮೆರಿಕಾದಲ್ಲಿ ಇದೇ ಮೊದಲ ಬಾರಿಗೆ ಹೊರಾಂಗಣದಲ್ಲಿ ಪ್ರದರ್ಶನಗೊಂಡ ಯಕ್ಷಗಾನ ಬಯಲಾಟ ಇದು ಎನ್ನುವುದು ಮತ್ತೊಂದು ವಿಶೇಷ.

ಯುಎಸ್ ಎಯಲ್ಲಿರುವ ಕನ್ನಡಿಗರು, ಕನ್ನಡೇತರರು ಸೇರಿದಂತೆ ನೂರಾರು ಮಂದಿ ‘ಮಹಿಷ ಮರ್ಧಿನಿ’ ಬಯಲಾಟವನ್ನು ಕಣ್ತುಂಬಿಕೊಂಡರು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳುವಾಯಿಯ “ಶ್ರೀಯಕ್ಷದೇವ" ಮಿತ್ರ ಕಲಾಮಂಡಳಿಯ ತಂಡದಲ್ಲಿ ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ, ಮದ್ದಳೆಯಲ್ಲಿ ಯಕ್ಷಗಾನ ಹಿಮ್ಮೇಳ ಗುರುಗಳಾದ ಪದ್ಮನಾಭ ಉಪಾಧ್ಯ, ಚೆಂಡೆಯಲ್ಲಿ ಹಿಮ್ಮೇಳ-ಮುಮ್ಮೇಳ ಕಲಾವಿದ ಎಮ್.ದೇವಾನಂದ್ ಭಟ್, ವೇಷಧಾರಿಗಳಾಗಿ ಪ್ರಸಿದ್ಧ ಎಮ್. ಎಲ್. ಸಾಮಗ (ವಿಷ್ಣು), ಚಂದ್ರಶೇಖರ ಧರ್ಮಸ್ಥಳ (ಸುಪಾರ್ಶ್ವಕ, ದೇವೇಂದ್ರ) , ಮಹೇಶ್ ಮಣಿಯಾಣಿ (ಮಾಲಿನಿದೂತ, ದೇವಚಾರಕ, ಸಿಂಹ), ಮೋಹನ್ ಬೆಳ್ಳಿಪ್ಪಾಡಿ (ಮಹಿಷಾಸುರ), ಪ್ರಶಾಂತ ಶೆಟ್ಟಿ ನೆಲ್ಯಾಡಿ (ಮಾಲಿನಿ, ಶ್ರೀ ದೇವಿ) ಭಾಗವಹಿಸಿದ್ದರು.

ಸ್ಥಳೀಯ ಕಲಾವಿದರಾದ ಮೀನಾಕ್ಷಿ ಐತಾಳ ಅವರು ಆದಿಮಾಯೆ, ಶರತ್ ಆಕಿರೆಕಾಡ್ ಅವರು ಬ್ರಹ್ಮ ಹಾಗೂ ಸುಹಾಸ್ ಐತಾಳ್ ಅವರು ಈಶ್ವರನ ಪಾತ್ರ ನಿರ್ವಹಿಸಿದರು.

ಹೂಸ್ಟನ್ ಕನ್ನಡ ವೃಂದದ ಅಧ್ಯಕ್ಷೆ ಮಂಗಳ ಪ್ರಸಾದ್ ಹಾಗು ಪುತ್ತಿಗೆ ಮಠದ ಬಾಲಕೃಷ್ಣ ಭಟ್ರು ಕಲಾವಿದರನ್ನು ಗೌರವಿಸಿದರು.

500ಕ್ಕೂ ಹೆಚ್ಚು ಮಂದಿ ಬಯಲಾಟವನ್ನು ವೀಕ್ಷಿಸಿದರು. ಊರಿನ ಸುಡುಮದ್ದು, ದೊಂದಿ, ರಾಳ, ಚಾ, ಗೋಳಿಬಜೆ, ಮಂಡಕ್ಕಿ ಚರುಮುರಿ ಮತ್ತು ನೆಲದಲ್ಲೇ ಕುಳಿತು ಯಕ್ಷಗಾನ ವೀಕ್ಷಿಸಿದ್ದು ಈ ಬಯಲಾಟದ ಮತ್ತೊಂದು ವಿಶೇಷತೆಯಾಗಿತ್ತು.

“ಈ ಬಯಲಾಟದಿಂದ 60 ವರ್ಷಗಳ ಹಿಂದೆ ಪೇಜಾವರದಲ್ಲಿ ನೋಡಿದ ಯಕ್ಷಗಾನದ ಸವಿನೆನಪು ಮರುಕಳಿಸಿತು” ದಿನೇಶ್ ಪೇಜಾವರ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News