ಭಾರೀ ಮಳೆ-ಪ್ರವಾಹ: ಸ್ಥಳೀಯ ಸಂಸ್ಥೆ ಚುನಾವಣೆ ಮುಂದೂಡಲು ಸಿ.ಟಿ.ರವಿ ಮನವಿ

Update: 2018-08-16 16:09 GMT

ಬೆಂಗಳೂರು, ಆ. 16: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ-ಅತಿವೃಷ್ಟಿ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಮುಂದೂಡಬೇಕು ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಸಿ.ಟಿ.ರವಿ, ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಗುರುವಾರ ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿ ಕರಾವಳಿ, ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಇದೆ. ಹೀಗಾಗಿ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಸರಿಯಲ್ಲ. ಆದುದರಿಂದ ಮೇಲ್ಕಂಡ ಜಿಲ್ಲೆಗಳಲ್ಲಿ ಈಗಾಗಲೇ ಘೋಷಿಸಿರುವ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಮುಂದೂಡಬೇಕು. ಮಳೆ ಮತ್ತು ಪ್ರವಾಹ ಪರಿಸ್ಥಿತಿ ಕಡಿಮೆಯಾದ ಬಳಿಕ ಚುನಾವಣೆ ನಡೆಸಬೇಕು. ಮಳೆ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸಿದರೆ ಜನತೆ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಕರಾವಳಿ ಮತ್ತು ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ತೀರ್ಥಯಾತ್ರೆ ಕೈಗೊಂಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಸಿ.ಟಿ.ರವಿ, ಮಳೆ-ಪ್ರವಾಹ ಪರಿಸ್ಥಿತಿಯಿಂದ ಸಂತ್ರಸ್ತರಾಗಿರುವ ಜನರ ನೆರವಿಗೆ ಸರಕಾರ ಧಾವಿಸಬೇಕು ಎಂದು ಆಗ್ರಹಿಸಿದರು.

ಟೆಲಿಫೋನ್ ಕದ್ದಾಲಿಕೆ: ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿ ನಾಯಕರ ದೂರವಾಣಿಯನ್ನು ಕದ್ದಾಲಿಕೆ ಮಾಡಲಾಗುತ್ತಿದೆ. ಗೃಹ ಇಲಾಖೆ ಅಧಿಕಾರಿಗಳ ಮೂಲಕ ಸಿಎಂ ನಿರ್ದೇಶನದಂತೆ ಟೆಲಿಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಸಿ.ಟಿ.ರವಿ ಗಂಭೀರ ಆರೋಪ ಮಾಡಿದರು.

ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದೆಂಬ ಆತಂಕದಲ್ಲಿ ಮುಖ್ಯಮಂತ್ರಿ ಇದ್ದಾರೆ. ಹೀಗಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಯಡಿಯೂರಪ್ಪ, ಈಶ್ವರಪ್ಪ ಸೇರಿ ಹಲವು ಮುಖಂಡರ ಫೋನ್ ಕದ್ದಾಲಿಸಲಾಗುತ್ತಿದೆ ಎಂದು ರವಿ ಆರೋಪಿಸಿದರು.

ರಾಜ್ಯದಲ್ಲಿನ ಮೈತ್ರಿ ಸರಕಾರವನ್ನು ಬೀಳಿಸಲು ಬಿಜೆಪಿ ಯಾವುದೇ ಪ್ರಯತ್ನವನ್ನು ಮಾಡುವುದಿಲ್ಲ. ಕೆಲ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದು, ಸರಕಾರದ ಮೇಲೆ ಯಾರೊಬ್ಬರಿಗೂ ವಿಶ್ವಾಸವಿಲ್ಲ. ಹೀಗಾಗಿ ಈ ಸರಕಾರ ಯಾವುದೇ ಕ್ಷಣದಲ್ಲಿ ಪತನ ಆಗಬಹುದು ಎಂದು ಸಿ.ಟಿ.ರವಿ ಭವಿಷ್ಯ ನುಡಿದರು.

‘ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಇಬ್ಬರು ಪರಸ್ಪರ ಒಬ್ಬರ ಮುಖ ಮತ್ತೊಬ್ಬರ ನೋಡದ ಸ್ಥಿತಿಯಲ್ಲಿದ್ದಾರೆ. ಇದು ರಾಜ್ಯದಲ್ಲಿನ ಮೈತ್ರಿ ಸರಕಾರದ ಸಮನ್ವಯತೆಯ ಮುನ್ಸೂಚನೆ’

-ಸಿ.ಟಿ.ರವಿ ಬಿಜೆಪಿ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News