ಸಂವಿಧಾನ ದಹನಕ್ಕೆ ಖಂಡನೆ: ಆರೆಸ್ಸೆಸ್ ನಿಷೇಧಿಸಲು ದಸಂಸ ಆಗ್ರಹ

Update: 2018-08-16 16:57 GMT

ಬೆಂಗಳೂರು, ಆ.16: ಹೊಸದಿಲ್ಲಿಯ ಜಂತರ್ ಮಂತರ್ ಮೈದಾನದಲ್ಲಿ ಸಂವಿಧಾನ ಸುಟ್ಟು ಹಾಕಿ ದೇಶದ್ರೋಹ ಎಸಗಿದ ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಆರೆಸ್ಸೆಸ್ ಅನ್ನು ನಿಷೇಧಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಒತ್ತಾಯಿಸಿದೆ.

ಬುಧವಾರ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಜಮಾಯಿಸಿದ ದಸಂಸ ಕಾರ್ಯಕರ್ತರು, ಸಂವಿಧಾನವನ್ನು ಸುಟ್ಟು ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಈ ಕೂಡಲೇ ಬಂಧಿಸಬೇಕು ಎಂದು ಪಟ್ಟು ಹಿಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಸಂವಿಧಾನ ಸುಟ್ಟಿರುವ ‘ಯುತ್ ಫಾರ್ ಇಕ್ವಾಲಿಟಿ’ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಬೇಕು. ಅದೇ ರೀತಿ, ಕಿಡಿಗೇಡಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಮತ್ತು ದೌರ್ಜನ್ಯ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಪೊಲೀಸರ ಸಮ್ಮುಖದಲ್ಲೇ ಈ ಹೀನ ಕೃತ್ಯ ನಡೆದಿರುವುದು ಇನ್ನಷ್ಟು ದುರದೃಷ್ಟಕರ ಸಂಗತಿ ಎಂದು ವಿಷಾದಿಸಿದ ಅವರು, ಮನುವಾದಿಗಳು ಕಾನೂನಿಗೆ ಹೆದರದೆ ಸಂವಿಧಾನದ ಪ್ರತಿಗಳನ್ನು ಸುಟ್ಟು ಹಾಕುವ ಮೂಲಕ ದೇಶಕ್ಕೆ ಅಗೌರವ ತೋರಿದ್ದಾರೆ. ಅಂಬೇಡ್ಕರ್ ವಿರುದ್ಧ ಧಿಕ್ಕಾರ ಕೂಗಿ ಅವಮಾನ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ಮಾಡುವ ಹಕ್ಕು ಸಂವಿಧಾನದತ್ತವಾಗಿ ಬಂದಿದೆ. ಹಕ್ಕನ್ನು ಕಲ್ಪಿಸಿರುವ ಸಂವಿಧಾನವನ್ನು ಸುಟ್ಟು ಹಾಕುವ ಮೂಲಕ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಕೇಂದ್ರ ಸರಕಾರ ಮೃದುಧೋರಣೆ ತಾಳುತ್ತಿದೆ ಎಂದು ದೂರಿದರು.

ದೇಶದ ಸಮಗ್ರತೆ, ಅಖಂಡತೆಗೆ ಮಾರಕವಾಗಿರುವ ಆರೆಸ್ಸೆಸ್, ವಿಎಚ್‌ಪಿ, ಭಜರಂಗದಳ ಹಾಗೂ ಸನಾತನ ಸಂಸ್ಥೆಗಳನ್ನು ನಿಷೇಧಿಸಬೇಕು ಎಂದ ಅವರು, ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ವಿಕೃತ ಮನಸ್ಸುಗಳು ದಲಿತರನ್ನು ವಿರೋಧಿಸುತ್ತಿವೆ ಎಂದರು. ಈ ವೇಳೆ ದಲಿತ ಹೋರಾಟಗಾರರಾದ ಜೋತಪ್ಪಹೊಸಳ್ಳಿ, ಸಿದಾರ್ಥ, ಸಿದ್ದಾಪುರ ಮಂಜುನಾಥ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News