ಬಿಬಿಎಂಪಿ ಪೌರಕಾರ್ಮಿಕರ ಊಟದ ಸಾಂಬಾರ್‌ನಲ್ಲಿ ಇಲಿ: ದೂರು ದಾಖಲು

Update: 2018-08-16 18:24 GMT

ಬೆಂಗಳೂರು, ಆ.16: ಬಿಬಿಎಂಪಿ ಪೌರಕಾರ್ಮಿಕ ಮಧ್ಯಾಹ್ನದ ಬಿಸಿಯೂಟಕ್ಕೆ ನೀಡಲಾಗುವ ಸಾಂಬಾರ್‌ನಲ್ಲಿ ಇಲಿ ಬಿದ್ದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಇಲ್ಲಿನ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಊಟ ಒದಗಿಸುವ ಗುತ್ತಿಗೆ ಪಡೆದಿರುವ ಚೆಫ್ ಟಾಕ್ ಸಂಸ್ಥೆಯು ದೂರು ನೀಡಿದ್ದು, ಆ.11ರಂದು ಗಾಯತ್ರಿನಗರದ ಬಿಬಿಎಂಪಿ ವಾರ್ಡ್ ಕಚೇರಿಗೆ ಪೌರ ಕಾರ್ಮಿಕರಿಗೆ ಊಟದ ಸರಬರಾಜು ಮಾಡಲು ತಿಳಿಸಲಾಗಿತ್ತು. ಬೆಳಗ್ಗೆ 7:30ಕ್ಕೆ ಅನ್ನ ಸಾಂಬಾರ್ ಮತ್ತು ಮಜ್ಜಿಗೆಯನ್ನು ಮಲ್ಲೇಶ್ವರಂನ ಅಡುಗೆ ಮನೆಯಿಂದ ಸಿದ್ಧಪಡಿಸಿ ಕಳುಹಿಸಲಾಗಿತ್ತು. ಎಲ್ಲ ಪೌರ ಕಾರ್ಮಿಕರ ಊಟ ಮುಗಿದ ಮೇಲೆ ಸತ್ತ ಇಲಿಯನ್ನು ಸಾಂಬಾರ್ ಪಾತ್ರೆಯಲ್ಲಿ ಹಾಕಿದ್ದಾರೆ. ಬಳಿಕ, ಕ್ಯಾಂಟೀನ್‌ನಲ್ಲಿದ್ದ ಸಾಂಬಾರ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು, ಅದರಲ್ಲಿ ಯಾವುದೇ ಋಣಾತ್ಮಕ ಅಂಶ ಪತ್ತೆಯಾಗಿಲ್ಲ. ಊಟ ಉತ್ತಮವಾಗಿದೆ ಎಂದು ವರದಿ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೈವಾಡ?: ಹಲವು ದಿನಗಳಿಂದ ಗಿರೀಶ್ ಲಕ್ಕಣ್ಣ ಎಂಬುವರು ಗಾಯತ್ರಿ ನಗರ ವಾರ್ಡ್ ಸದಸ್ಯ ಎಂದು ಹೇಳಿಕೊಂಡು ಮೊಬೈಲ್ ಕರೆ ಮಾಡುತ್ತಿದ್ದರು. ನಿಮ್ಮ ಮುಖ್ಯಸ್ಥರಿಗೆ ನನ್ನನ್ನು ಬಂದು ಭೇಟಿ ಮಾಡುವಂತೆ ಹೇಳು ಎಂದು ಹೇಳುತ್ತಿದ್ದರು. ನಮ್ಮ ಸಂಸ್ಥೆಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಈ ಕೃತ್ಯದ ಹಿಂದೆ ಗಿರೀಶ್ ಲಕ್ಕಣ್ಣ ಅವರ ಕೈವಾಡವಿರುವ ಅನುಮಾನ ಇರುತ್ತದೆ ಎಂದು ಸಂಸ್ಥೆಯ ಬಾಲ ಮುರುಗನ್ ದೂರಿನಲ್ಲಿ ತಿಳಿಸಿದ್ದಾರೆ.

ಎಫ್‌ಐಆರ್: ಗಾಯತ್ರಿ ನಗರದ ವಾರ್ಡ್ ಸದಸ್ಯೆ ಚಂದ್ರಕಲಾ ಅವರ ಪತಿ ಗಿರೀಶ್ ಲಕ್ಕಣ್ಣನವರ್ ವಿರುದ್ಧ ಸಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐ ಆರ್ ದಾಖಲಾಗಿದೆ. ಚೆಫ್ ಟಾಕ್ ಸಂಸ್ಥೆಯ ಅಧಿಕಾರಿ ಬಾಲಮುರುಗನ್ ನೀಡಿದ ದೂರಿನ ಆಧಾರದ ಮೇಲೆ ಗಿರೀಶ್ ಲಕ್ಕಣ್ಣನವರ್ ಮತ್ತು ಇನ್ನೊಬ್ಬ ಅನಾಮಧೇಯ ವ್ಯಕ್ತಿಯ ಮೇಲೆ ಐಪಿಸಿ ಸೆಕ್ಷನ್ 427, 270, 272 ರ ಅಡಿ ಮೊಕದ್ದಮೆ ದಾಖಲಾಗಿದೆ.

ಕಠಿಣ ಕ್ರಮ: ಗಾಯತ್ರಿ ನಗರ ವಾರ್ಡ್‌ನ ಕ್ಯಾಂಟೀನ್ ನಿಂದ ಪೌರಕಾರ್ಮಿಕರಿಗೆ ಪೂರೈಸಲಾದ ಸಾಂಬಾರ್‌ನಲ್ಲಿ ಇಲಿ ಸತ್ತ ಪ್ರಕರಣಕ್ಕೆ ಸಂಬಂಧ ಈಗಾಗಲೇ ದೂರು ದಾಖಲಿಸಿದೆ. ನಗರದ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಪ್ರಕರಣದ ಗಂಭೀರತೆಯನ್ನು ವಿವರಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮನವಿ ಮಾಡಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News