ಟ್ವಿಟ್ಟರ್ ಟ್ರೋಲ್‌ನ ’ಗೂಗ್ಲಿ’ಗೆ ಮಿಥಾಲಿ ’ಸಿಕ್ಸ್’

Update: 2018-08-17 04:17 GMT

ಹೊಸದಿಲ್ಲಿ, ಆ.17: ನೇರ ಮತ್ತು ಪ್ರಖರ ಮಾತಿಗೆ ಹೆಸರಾದ ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಟ್ವಿಟ್ಟರ್‌ನಲ್ಲಿ ತಮ್ಮ ಕಾಲೆಳೆಯಲು ಬಂದ ವ್ಯಕ್ತಿಯೊಬ್ಬನ ವಿರುದ್ಧ ಮಾತಿನ ಚಾಟಿ ಬೀಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಡೆದ ಘಟನೆ ಇಷ್ಟು. ಸದ್ಯ ನಡೆಯುತ್ತಿರುವ ಮಹಿಳೆಯರ ಟಿ-20 ಚಾಲೆಂಜರ್ ಟ್ರೋಫಿ-2018ರಲ್ಲಿ ಇಂಡಿಯಾ ಬ್ಲೂ ತಂಡದ ನಾಯಕತ್ವ ವಹಿಸಿಕೊಂಡಿರುವ ಮಿಥಾಲಿರಾಜ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ವಾತಂತ್ರ್ಯ ದಿನ ಸಂದೇಶವನ್ನು ಗುರುವಾರ ಪೋಸ್ಟ್ ಮಾಡಿದ್ದರು. ಟ್ವಿಟ್ಟರ್ ಟ್ರೋಲ್ ಒಬ್ಬ "ಸ್ವಾತಂತ್ರ್ಯ ದಿನ ಮುಗಿದಿದೆ ಮೇಡಂ. ಸೆಲೆಬ್ರಿಟಿಯಾಗಿ ಇದು ಒಳ್ಳೆಯದಲ್ಲ" ಎಂದು ತಡವಾಗಿ ಪೋಸ್ಟ್ ಮಾಡಿದ್ದನ್ನು ಆಕ್ಷೇಪಿಸಿ ಕ್ರಿಕೆಟ್‌ಪಟುವಿನ ಕಾಲೆಳೆಯಲು ಮುಂದಾದ.

ಆದರೆ ತಕ್ಷಣ ಮಿಥಾಲಿ ಇದಕ್ಕೆ ಸ್ಪಂದಿಸಿ, ತಡವಾಗಿ ಪೋಸ್ಟ್ ಮಾಡಲು ಕಾರಣ ವಿವರಿಸಿದರು. "ನನ್ನನ್ನು ಸೆಲೆಬ್ರಿಟಿಯಾಗಿ ಗೌರವಿಸಿದ್ದಕ್ಕೆ ಧನ್ಯವಾದ. ನಾನು 1999ರಿಂದ ರಾಷ್ಟ್ರದ ಕರ್ತವ್ಯದಲ್ಲಿರುವ ಅಥ್ಲೀಟ್ ಮಾತ್ರ. ನಮಗೆ ಚಾಲೆಂಜರ್ಸ್‌ ಟ್ರೋಫಿ ಟೂರ್ನಿ ನಡೆಯುತ್ತಿದೆ. ಮೈದಾನದಲ್ಲಿ ನನ್ನ ಬಳಿ ಫೋನ್ ಇರುವುದಿಲ್ಲ ಅಥವಾ ಪಂದ್ಯ ನಡೆಯುವ ದಿನ ಅದು ಆಫ್ ಇರುತ್ತದೆ. ಬಹುಶಃ ವಿಳಂಬಕ್ಕೆ ಇದು ಸೂಕ್ತ ಕಾರಣ ಎನಿಸುವುದಿಲ್ಲವೇ?" ಎಂದು ಚಾಟಿ ಬೀಸಿದರು.

ಕ್ಷಣ ಮಾತ್ರದಲ್ಲೇ ಮಿಥಾಲಿಯವರ ಪೋಸ್ಟ್ ವೈರಲ್ ಆಯಿತು. ಹಲವಾರು ಮಂದಿ ಅಭಿಮಾನಿಗಳು ಮಿಥಾಲಿ ಪರ ನಿಂತರು. "ನಿಮ್ಮ ಕಾರಣ ಸಮರ್ಥನೀಯ. ಅದನ್ನು ನೀವು ಸಮರ್ಥಿಸಿಕೊಳ್ಳಬೇಕಾದ್ದಿಲ್ಲ. ಕ್ರಿಕೆಟ್ ಬಗ್ಗೆ ನಿಮ್ಮ ಬದ್ಧತೆಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ಹಾಗೂ ಗೌರವಿಸುತ್ತೇವೆ. ಇಂಥ ಅಭಿಪ್ರಾಯಗಳನ್ನು ನಿರ್ಲಕ್ಷಿಸಿ ನೀವು ಆಟದ ಬಗ್ಗೆ ಗಮನ ಹರಿಸಿ. ಮತ್ತೆ ಇದು ನನ್ನ ಅಭಿಪ್ರಾಯ ಮಾತ್ರ. ಇದನ್ನೂ ನೀವು ಕಡೆಗಣಿಸಬಹುದು" ಎಂದು ಒಬ್ಬ ಅಭಿಮಾನಿ ಟ್ವೀಟ್ ಮಾಡಿದರು. ಮತ್ತೊಬ್ಬ ಟ್ವಿಟ್ಟರ್ ಬಳಕೆದಾರ, "ಏನು ಉತ್ತರ.. ದಿಲ್ ಜೀತ್ ಲಿಯಾ 100" ಎಂದು ಉದ್ಗರಿಸಿದ. "ಇಂಥ ವ್ಯಕ್ತಿಗಳಿಗೆ ಸ್ವಾತಂತ್ರ್ಯ ಎಂದರೇನು ಎಂದೇ ಗೊತ್ತಿಲ್ಲ" ಎಂದು ಅಪಸ್ವರ ಎತ್ತಿದ ವ್ಯಕ್ತಿಗೆ ಮತ್ತೆ ಕೆಲವರು ಮಂಗಳಾರತಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News