ವಾಜಪೇಯಿಗೆ 'ಮರುಹುಟ್ಟು' ನೀಡಿದ ಬೆಂಗಳೂರು

Update: 2018-08-17 04:24 GMT

ಬೆಂಗಳೂರು, ಆ.17: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ರಾಜಕೀಯ ಪ್ರಭಾವಳಿಯನ್ನು ವಿಸ್ತರಿಸುವ ಮೂಲಕ ಅವರ ರಾಜಕೀಯಕ್ಕೆ ಮರುಹುಟ್ಟು ನೀಡಿದ ಕೀರ್ತಿ ಬೆಂಗಳೂರಿಗೆ ಸಲ್ಲುತ್ತದೆ.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ವಾಜಪೇಯಿಯವರ ರಾಜಕೀಯ ಪ್ರಭಾವ ದಟ್ಟವಾಯಿತು. 1977ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನ್ಯಾಯಮೂರ್ತಿ ಕೆ.ಎಸ್.ಹೆಗ್ಡೆಯವರನ್ನು ಕಣಕ್ಕಿಳಿಸಿ ಗೆಲ್ಲಿಸುವಲ್ಲಿ ಎಲ್.ಕೆ.ಆಡ್ವಾಣಿಯವರ ಜತೆಗೆ ವಾಜಪೇಯಿ ಪ್ರಮುಖ ಪಾತ್ರ ವಹಿಸಿದ್ದರು.

ತುರ್ತು ಪರಿಸ್ಥಿತಿಯಿಂದಾಗಿ ಕಾಂಗ್ರೆಸ್ ಪಕ್ಷ ಉತ್ತರ ರಾಜ್ಯಗಳಲ್ಲಿ ಧೂಳೀಪಟವಾದರೆ, ದಕ್ಷಿಣದಲ್ಲಿ ತನ್ನ ಪ್ರಾಬಲ್ಯ ಉಳಿಸಿಕೊಂಡಿತ್ತು. ಕಾಂಗ್ರೆಸ್ ವಿರೋಧಿ ಅಲೆ ದೇಶಾದ್ಯಂತ ಇದ್ದರೂ, ಕರ್ನಾಟಕದಲ್ಲಿ ಜನತಾ ಪಕ್ಷ ಬೆಂಗಳೂರು ದಕ್ಷಿಣ ಹಾಗೂ ಹಾಸನ ಕ್ಷೇತ್ರವನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಜನತಾ ಪಕ್ಷದ ಗೆಲುವಿಗೆ ಮುಖ್ಯ ಕಾರಣವಾದದ್ದು ವಾಜಪೇಯಿಯವರ ಅದ್ಭುತ ಭಾಷಣಗಳು. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಲವು ಚುನಾವಣಾ ರ್ಯಾಲಿಗಳನ್ನು ನಡೆಸಿದ ವಾಜಪೇಯಿ, ತಮ್ಮ ವಾಕ್ಪಟುತ್ವದಿಂದ ಜನ ಸಮುದಾಯವನ್ನು ಆಕರ್ಷಿಸುತ್ತಿದ್ದರು. ರಾಜಕೀಯ ಅನುನಭವಿ ಎನಿಸಿದ್ದ ಕೆ.ಎಸ್.ಹೆಗ್ಡೆ, ಕಾಂಗ್ರೆಸ್‌ನ ದಿಗ್ಗಜ ಕೆಂಗಲ್ ಹನುಮಂತಯ್ಯ ಅವರನ್ನು ಸೋಲಿಸಿದ್ದರು.

"ನಮ್ಮ ತಂದೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂಬ ಕಾರಣಕ್ಕೆ ಮೊದಲು ಸ್ಪರ್ಧೆಗೆ ನಿರಾಕರಿಸಿದರು. ಆದರೆ ವಾಜಪೇಯಿ ಹಾಗೂ ಆಡ್ವಾಣಿ ಮನವೊಲಿಸಿದರು. ನನ್ನ ತಂದೆಯ ಗೆಲುವಿಗೆ ವಾಜಪೇಯಿಯವರ ಅದ್ಭುತ ಭಾಷಣಗಳು ಕಾರಣ" ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ನೆನಪಿಸಿಕೊಂಡರು.

1989ರಲ್ಲಿ ಗುಂಡೂರಾವ್ ಜಯಿಸಿದ್ದನ್ನು ಹೊರತುಪಡಿಸಿದರೆ, ಅಂದಿನಿಂದ ಇಂದಿನವರೆಗೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸೇತರ ಪಕ್ಷಗಳು ಜಯ ಸಾಧಿಸುತ್ತಿವೆ ಎನ್ನುವುದು ಗಮನಾರ್ಹ.

ವಾಜಪೇಯಿ 1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿದ್ದರು. ಮಧು ದಂಡವತೆ, ಆಡ್ವಾಣಿ ಹಾಗೂ ಶ್ಯಾಮನಂದನ್ ಮಿಶ್ರಾ ಅವರಂಥ ಗಣ್ಯರ ಜತೆ ವಾಜಪೇಯಿ ಕೂಡಾ ಸೆರೆಮನೆ ವಾಸ ಅನುಭವಿಸಿದರು. ಇತರ ಮುಖಂಡರನ್ನು ಬೇರೆಡೆಗೆ ಸ್ಥಳಾಂತರಿಸಿದರೂ, ಅನಾರೋಗ್ಯ ಕಾರಣದಿಂದ ವಾಜಪೇಯಿ ಸೆಂಟ್ರಲ್ ಜೈಲಿನಲ್ಲೇ ಉಳಿದರು. ವಿಕ್ಟೋರಿಯಾ ಆಸ್ಪತ್ರೆ ವೈದ್ಯರಿಂದ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗೂ ಒಳಗಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News