ಕರ್ನಾಟಕ, ಕೇರಳದಲ್ಲಿ ನಿರಂತರ ಮಳೆ: ಕೆಎಸ್ಸಾರ್ಟಿಸಿಗೆ 89 ಲಕ್ಷಕ್ಕೂ ಅಧಿಕ ನಷ್ಟ

Update: 2018-08-17 14:30 GMT

ಬೆಂಗಳೂರು, ಆ.17: ಕರ್ನಾಟಕ ಹಾಗೂ ನೆರೆಯ ರಾಜ್ಯ ಕೇರಳದಲ್ಲಿ ನಿರಂತರ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಸಂಚಾರ ಅಸ್ತವ್ಯಸ್ತಗೊಂಡಿದ್ದು, ನಾಡಿನ ಜೀವನಾಡಿ ಕೆಎಸ್ಸಾರ್ಟಿಸಿಗೆ ಬರೋಬ್ಬರಿ 89 ಲಕ್ಷಕ್ಕೂ ಅಧಿಕ ಹಣ ನಷ್ಟ ಉಂಟಾಗಿದೆ.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಕೊಡಗು, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಸೇರಿದಂತೆ ನಾನಾ ಕಡೆ ಪ್ರವಾಹ ಉಂಟಾಗಿದೆ. ಇನ್ನು, ನೆರೆ ರಾಜ್ಯ ಕೇರಳದಲ್ಲಿಯೂ ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮದಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜೊತೆಗೆ ಭೂಕುಸಿತ, ಗುಡ್ಡ ಕುಸಿತ, ಮರಗಳು ಧರೆಗುರುಳಿರುವುದಲ್ಲದೆ, ಪ್ರವಾಹದಿಂದಾಗಿ ರಸ್ತೆ ಸಂರ್ಪಕಗಳು ಕಡಿತಗೊಂಡಿದ್ದು, ಇದರಿಂದ ಕೆಎಸ್ಸಾರ್ಟಿಸಿ ಸಂಚಾರ ನಿಂತಿದೆ.

ರಾಜಧಾನಿ ಬೆಂಗಳೂರಿನಿಂದ ಧರ್ಮಸ್ಥಳ, ಉಡುಪಿ, ಪುತ್ತೂರು, ಕುಕ್ಕೆ ಸುಬ್ರಮ್ಮಣ್ಯ, ಕುಂದಾಪುರಕ್ಕೆ ತೆರಳಬೇಕಿದ್ದ 74 ಕೆಎಸ್ಸಾರ್ಟಿಸಿ ಬಸ್‌ಗಳ ಸಂಚಾರ ರದ್ದು ಗೊಳಿಸಲಾಗಿದ್ದು, ಸಂಸ್ಥೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಂಗಳೂರು ಮಾರ್ಗದ ಬಸ್ ಸಂಚಾರ ರದ್ದು ಮಾಡಲಾಗಿದೆ.

ಅಷ್ಟೇ ಅಲ್ಲದೆ, ಕೇರಳ ಮಾರ್ಗದ ಎಲ್ಲಾ ಬಸ್‌ಗಳ ಸಂಚಾರವನ್ನು ಗುರುವಾರದಿಂದ ಸ್ಥಗಿತಗೊಳಿಸಲಾಗಿದೆ. ತ್ರಿಶೂರ್, ಪಾಲಕ್ಕಾಡ್, ಊಟಿ, ತಮಿಳುನಾಡಿನ ರಸ್ತೆಗಳಲ್ಲಿ ಕಂದಕ ಉಂಟಾಗಿರುವುದರಿಂದ ಸುಮಾರು ಬಸ್‌ಗಳು ಮಾರ್ಗ ಮಧ್ಯೆದಲ್ಲೇ ಸಿಲುಕಿವೆ ಎಂದರು.

ಕಳೆದ ಮೂರು ದಿನಗಳಿಂದ ಕೆಎಸ್ಸಾರ್ಟಿಸಿ ಒಟ್ಟು 706 ಪ್ರವಾಸವನ್ನು ರದ್ದುಗೊಳಿಸಲಾಗಿದ್ದು, ಮಂಗಳವಾರ 187, ಬುಧವಾರ 261, ಗುರುವಾರ 25 ಪ್ರವಾಸಗಳು ರದ್ದುಗೊಂಡಿವೆ. ಇದರಿಂದಾಗಿ ಕ್ರಮವಾಗಿ 20.4 ಲಕ್ಷ, 31ಲಕ್ಷ, 38 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News