ಎರಡೇ ವರ್ಷದಲ್ಲಿ ನಿಂತು ಹೋದ ಸಜಾ ಬಂಧಿಗಳ ರೂಪಾಂತರ ಕಾರ್ಯಕ್ರಮ
ಬೆಂಗಳೂರು, ಆ.17: ವಿವಿಧ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಯಾಗಿ ಜೈಲಿನಲ್ಲಿ ಉತ್ತಮ ನಡವಳಿಕೆ ತೋರುವ ಹಾಗೂ ಅವಧಿ ಪೂರ್ವ ಬಿಡುಗಡೆಯಾಗುವ ಬಂಧಿಗಳ ಆತ್ಮವಿಶ್ವಾಸ ವೃದ್ಧಿಸಲು ರೂಪಿಸಿದ್ದ ರೂಪಾಂತರ ಕಾರ್ಯಕ್ರಮ ಎರಡೇ ವರ್ಷಕ್ಕೆ ನಿಂತಿದೆ.
ಹಿಂದೆ ಬಂದಿಖಾನೆ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಎಚ್.ಎಸ್.ಸತ್ಯನಾರಾಯಣರಾವ್ ಅವಧಿಯಲ್ಲಿ ಅವಧಿ ಪೂರ್ವ ಬಿಡುಗಡೆಯಾಗುವ ಸಜಾ ಬಂಧಿಗಳ ಮನೋ ಸ್ಥೈರ್ಯ ಹೆಚ್ಚಿಸಲು ಹಾಗೂ ಬಿಡುಗಡೆ ಬಳಿಕ ಸಮಾಜದಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬುದರ ಬಗ್ಗೆ ರೂಪಾಂತರ ಒಂದು ಹೊಸ ಪಯಣ ಎಂಬ ವಿನೂತನ ತರಬೇತಿ ಕಾರ್ಯಕ್ರಮ 2016 ರ ನವೆಂಬರ್ ತಿಂಗಳಲ್ಲಿ ಪರಪ್ಪನ ಕೇಂದ್ರ ಕಾರಾಗೃಹ ಆವರಣದಲ್ಲಿ ಗೃಹ ಸಚಿವರಾಗಿದ್ದ ಜಿ. ಪರಮೇಶ್ವರ್ ಉದ್ಘಾಟಿಸಿ ಶ್ಲಾಘನೆ ವ್ಯಕ್ತಪಡಿಸಿದ್ದರು. ಆದರೆ ಇದೀಗ ಕಾರ್ಯಕ್ರಮ ಆರಂಭಿಸಿದ ಎರಡೆ ವರ್ಷದಲ್ಲಿ ವಿವಿಧ ಕಾರಣಕ್ಕಾಗಿ ರೂಪಾಂತರ ತರಬೇತಿ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿದೆ ಎಂದು ನಗರ ಸೆಂಟ್ರಲ್ ಜೈಲಿನ ಮೇಲಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಹತ್ತಾರು ವರ್ಷಗಳಿಂದ ಸಜೆ ಅನುಭವಿಸಿ ಪಶ್ಚಾತ್ತಾಪ ಪಡುತ್ತಾರೆ. ಬಳಿಕ ಸನ್ನಡತೆ ತೋರಿ ಅವಧಿ ಪೂರ್ವ ಬಿಡುಗಡೆಯಾಗಿ ಬಾಹ್ಯ ಪ್ರಪಂಚಕ್ಕೆ ಕಾಲಿಡುವ ಬಂಧಿಗಳು ಹೊರಗಿನವರಿಂದ ಚುಚ್ಚು ಮಾತುಗಳಿಂದ ಜರ್ಜರಿತರಾಗಿ ಮಾನಸಿಕ ಖಿನ್ನತೆ ಬೆಳೆಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿವೆ. ಇನ್ನು ಕೆಲವರು ಸಮಾಜದ ವಕ್ರದೃಷ್ಟಿಗೆ ಒಳಗಾಗಿ ಅದನ್ನು ಎದುರಿಸಲು ಸಾಧ್ಯವಾಗದೆ, ಮತ್ತೆ ಜೈಲಿನ ಬಾಗಿಲು ಬಡಿದಿರುವುದು ಹೊಸ ಸಂಗತಿಯೇನಲ್ಲ. ಹೀಗಾಗಿ ಜೈಲಿನ ನಾಲ್ಕು ಗೋಡೆಯಲ್ಲಿ ಕಳೆಯುವ ಶಿಕ್ಷಾ ಬಂಧಿಗಳಿಗೆ ಮಾನಸಿಕವಾಗಿ ಶಕ್ತಿ ತುಂಬಿ, ನೈತಿಕ ಮೌಲ್ಯಗಳು ಹೆಚ್ಚಿಸಲು ಎಚ್.ಎಸ್.ಸತ್ಯನಾರಾಯಣ್ ರಾವ್ ಚೀನಾದ ಜೈಲು ಮಾದರಿಯಂತೆ ರಾಜ್ಯದಲ್ಲಿಯೂ ದಿ ಪೀಸ್ ಮೇಕರ್ ಎನ್‌ಜಿಓ ಸಂಸ್ಥೆ ನೆರವಿನಿಂದ ರೂಪಾಂತರ ಹೆಸರಿನಲ್ಲಿ ಏಳು ಕೇಂದ್ರ ಕಾರಾಗೃಹಗಳಲ್ಲಿ ಒಟ್ಟು 190 ಸಜಾ ಬಂಧಿಗಳಿಗೆ ಬಿಡುಗಡೆಗೂ ಮುನ್ನ 45 ದಿನಗಳ ಕಾಲ ತರಬೇತಿ ಕೊಡಿಸಲಾಗಿತ್ತು. ತರಬೇತಿಯಲ್ಲಿ ಪಾಲ್ಗೊಂಡು ಜೈಲಿನಿಂದ ಹೊರಬಂದ ಸಜಾ ಬಂಧಿಗಳು ತರಬೇತಿ ಪ್ರಯೋಜನ ಪಡೆದಿದ್ದರು. ಯಾವ ಕಾರಣಕ್ಕಾಗಿ ರೂಪಾಂತರ ಕಾರ್ಯಕ್ರಮ ನಿಲ್ಲಿಸಲಾಗಿದೆ ಎಂಬುದನ್ನು ಹೇಳಲು ಅಧಿಕಾರಿಗಳು ನಿರಾಕರಿಸಿದ್ದಾರೆ.