ಕೊಡಗು ಜಿಲ್ಲೆಯಲ್ಲಿ ಪರಿಹಾರ ಕಾರ್ಯಾಚರಣೆ: ಮುಖ್ಯಮಂತ್ರಿ ನೇತೃತ್ವದಲ್ಲಿ ಆ.18 ರಂದು ಉನ್ನತಮಟ್ಟದ ಸಭೆ

Update: 2018-08-17 18:00 GMT

ಬೆಂಗಳೂರು, ಆ.17: ಹೊಸದಿಲ್ಲಿಯಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಿಂತಿರುಗಿದ ಕೂಡಲೇ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಪರಿಹಾರ ಕಾರ್ಯಾಚರಣೆ ಕುರಿತು ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಗಳೊಂದಿಗೆ ಶುಕ್ರವಾರ ಚರ್ಚಿಸಿದರು. ಶನಿವಾರ(ಆಗಸ್ಟ್ 18) ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿ ಈ ಕುರಿತು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.

ಕೊಡಗಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನಾಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಮೈಸೂರು, ಮಂಡ್ಯ, ರಾಮನಗರ, ಹಾಸನ ಜಿಲ್ಲೆಗಳ ಕಂದಾಯ ಇಲಾಖೆಯ ಸಿಬ್ಬಂದಿ, ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಪರಿಹಾರ ಕಾರ್ಯಗಳಿಗಾಗಿ ಕೊಡಗು ಜಿಲ್ಲೆಗೆ ನಿಯೋಜಿಸಲಾಗುತ್ತಿದೆ.

ಗಂಜಿ ಕೇಂದ್ರಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಹಾರ ಸಾಮಗ್ರಿ, ಹೊದಿಕೆಗಳನ್ನು ಮೈಸೂರಿನಿಂದ ಕಳುಹಿಸಲಾಗುತ್ತಿದೆ. ಅಲ್ಲದೆ 200 ಜನ ಸ್ವಯಂ ಸೇವಕರು ಮೈಸೂರಿನಿಂದ ಕೊಡಗು ಜಿಲ್ಲೆಗೆ ತೆರಳುತ್ತಿದ್ದಾರೆ. ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಕೊಡಗಿನಲ್ಲಿಯೆ ಮೊಕ್ಕಾಂ ಹೂಡಿದ್ದು ಪರಿಹಾರ ಕಾರ್ಯಾಚರಣೆ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ರಕ್ಷಣಾ ಪಡೆಗಳ ನಿಯೋಜನೆ: ಡೊಂಗ್ರಾ ರಿಜಿಮೆಂಟ್‌ನ 60 ಸದಸ್ಯರು, ಇಂಜಿನಿಯರಿಂಗ್ ಕಾರ್ಯಪಡೆಯು 73 ಹಡಗುಗಳು, ನೌಕಾಪಡೆಯ 12 ನುರಿತ ಚಾಲಕರು, ಎನ್‌ಡಿಆರ್‌ಎಫ್‌ನ 30 ಸದಸ್ಯರ ಒಂದು ತಂಡ, ನಾಗರಿಕ ರಕ್ಷಣೆಯ 45 ಸದಸ್ಯರು ಹಡಗುಗಳು ಹಾಗೂ ರಕ್ಷಣಾ ಸಾಮಗ್ರಿಗಳು, ಅಗ್ನಿ ಶಾಮಕ ದಳದ 200 ಮಂದಿಯನ್ನು ರಕ್ಷಣಾ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ.

ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್‌ಗಳು ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ. ಶನಿವಾರ ಬೆಳಗ್ಗೆ 6.15ಕ್ಕೆ ಮೈಸೂರಿನಿಂದ ಹೆಲಿಕಾಪ್ಟರ್‌ಗಳು ಕಾರ್ಯಾಚರಣೆಗೆ ಇಳಿಯಲಿವೆ. ಇಂದು ಸಂಜೆ 5.30ರ ವೇಳೆಗೆ 873 ಮಂದಿಯನ್ನು ರಕ್ಷಿಸಲಾಗಿದೆ. ಆ.15ರವರೆಗೆ ಆರು ಮಂದಿ ಮೃತಪಟ್ಟಿದ್ದು, 845 ಮನೆಗಳಿಗೆ ಹಾನಿಯಾಗಿದೆ.

98 ಕಿಲೋಮೀಟರ್ ರಸ್ತೆ ಹಾಳಾಗಿದೆ. 58 ಸೇತುವೆಗಳು ಹಾನಿಗೀಡಾಗಿವೆ. 243 ಸರಕಾರಿ ಕಟ್ಟಡಗಳು, 3006 ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೀಡಾಗಿವೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News