ಹೆಪಟೈಟಿಸ್ ರೋಗಕ್ಕೆ ಕಡಿವಾಣ ಹಾಕಬೇಕು: ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್

Update: 2018-08-17 18:02 GMT

ಬೆಂಗಳೂರು, ಆ.17: ದೇಶದಲ್ಲಿ ಹೆಪಟೈಟಿಸ್ ರೋಗದ ಪ್ರಕರಣಗಳು ಹೆಚ್ಚಾಗಿದ್ದು, ಇದಕ್ಕೆ ಸೂಕ್ತ ರೀತಿಯಲ್ಲಿ ಕಡಿವಾಣ ಹಾಕಬೇಕು ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಹೇಳಿದರು.

ಶುಕ್ರವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಫೋರ್ಟಿಸ್ ಆಸ್ಪತ್ರೆಯು ಹೆಪಟೈಟಿಸ್ ಕುರಿತು ಜಾಗೃತಿ ಮೂಡಿಸಲು ಏರ್ಪಡಿಸಿದ್ದ, 100ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗೆ ಹೆಪಟೈಟಿಸ್ ಲಸಿಕೆಯ ಮೂರು ಶಾಟ್ ಆರೋಗ್ಯಾಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದಲ್ಲಿ ದೊಡ್ಡ ಸಂಖ್ಯೆಯ ಹೆಪಟೈಟಿಸ್ ಪ್ರಕರಣಗಳು ಇದ್ದು, ಈ ರೋಗ ಹರಡುವುದನ್ನು ತಡೆಯುವುದಕ್ಕಾಗಿ ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ಅದೇ ರೀತಿ, ಈ ಕುರಿತು ಅರಿವು ಮೂಡಿಸಬೇಕು. ಜೊತೆಗೆ ಆರೋಗ್ಯದ ಬಗ್ಗೆಯೂ ಜನರಿಗೆ ಶಿಕ್ಷಣ ನೀಡುವಂತಾಗಬೇಕು ಎಂದು ನುಡಿದರು.

ಪಿತ್ತಜನಕಾಂಗ ರೋಗ ಶಾಸ್ತ್ರ ಸಲಹಾ ತಜ್ಞ ಡಾ.ಡಿ.ಶ್ರೀನಿವಾಸ ಮಾತನಾಡಿ, ಹೆಪಟೈಟಿಸ್ ಸದ್ದಿಲ್ಲದೇ ಕೊಲ್ಲುವ ಖಾಯಿಲೆಯಾಗಿದೆ. ಉದಾಹರಣೆಗೆ ಹೆಪಟೈಟಿಸ್ ಬಿ ಬಹಳ ಬೇಗನೆ ಹರಡುವ ರೋಗವಾಗಿದೆ. ಅತ್ಯಂತ ಕನಿಷ್ಠ ಪ್ರಮಾಣದ ರಕ್ತದಿಂದಲೇ ಈ ರೋಗದ ಸೋಂಕು ಹರಡಬಹುದೆಂದು ತಿಳಿದು ಬಂದಿದೆ ಎಂದರು.

ಜನರು ಆರೋಗ್ಯ ತಪಾಸಣೆ ಮತ್ತು ಲಸಿಕೆ ತೆಗೆದುಕೊಳ್ಳುವುದನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ಗಂಭೀರ ಪಿತ್ತಜನಕಾಂಗ ಸಂಬಂಧಿ ರೋಗಗಳಾದ ಸಿರಾಸಿಸ್ ಮತ್ತು ಕ್ಯಾನ್ಸರ್‌ಗೆ ದಾರಿಯಾಗಬಹುದು. ರೋಗ ಹರಡುವುದನ್ನು ತಡೆಯಲು ಗಮನ ಕೇಂದ್ರೀಕರಿಸಿ ಪ್ರಯತ್ನಗಳನ್ನು ನಡೆಸಬೇಕಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News