ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆಗೈದ ರಿಷಭ್ ಪಂತ್

Update: 2018-08-18 11:53 GMT

ಟ್ರೆಂಟ್‌ಬ್ರಿಡ್ಜ್, ಆ.18: ದಿಲ್ಲಿಯ ಯುವ ವಿಕೆಟ್‌ಕೀಪರ್-ದಾಂಡಿಗ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆಗೈದರು.

  ನಾಟಿಂಗ್‌ಹ್ಯಾಮ್‌ನಲ್ಲಿ ಶನಿವಾರ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಆರಂಭಕ್ಕೆ ಮೊದಲು ನಾಯಕ ವಿರಾಟ್ ಕೊಹ್ಲಿ ತನ್ನದೇ ರಾಜ್ಯದ ಆಟಗಾರನಿಗೆ ಟೆಸ್ಟ್ ಕ್ಯಾಪ್‌ನ್ನು ಹಸ್ತಾಂತರಿಸಿದರು. ಭಾರತದ ಆಟಗಾರರು ಹಾಗೂ ಕೋಚಿಂಗ್ ಸಿಬ್ಬಂದಿ ಈ ಸಂದರ್ಭಕ್ಕೆ ಸಾಕ್ಷಿಯಾದರು.

ಪಂತ್ ಭಾರತದ ಪರ ಟೆಸ್ಟ್ ಪಂದ್ಯವನ್ನಾಡಿದ 291ನೇ ಆಟಗಾರ ಎನಿಸಿಕೊಂಡರು. ಪಂತ್ ಅಂತಿಮ-11ರ ಬಳಗ ಸೇರ್ಪಡೆಯಾದ ಕಾರಣ ಚೆನ್ನೈ ದಾಂಡಿಗ ದಿನೇಶ್ ಕಾರ್ತಿಕ್ ಸರಣಿ ನಿರ್ಣಾಯಕ 3ನೇ ಟೆಸ್ಟ್ ಪಂದ್ಯದಿಂದ ದೂರ ಉಳಿದಿದ್ದಾರೆ.

ಭಾರತ ತಂಡದಲ್ಲಿ 3ನೇ ಪಂದ್ಯಕ್ಕೆ ಇನ್ನೆರಡು ಬದಲಾವಣೆ ಮಾಡಲಾಗಿದ್ದು, ಸ್ಪಿನ್ನರ್ ಕುಲ್‌ದೀಪ್ ಯಾದವ್ ಹಾಗೂ ಮುರಳಿ ವಿಜಯ್ ಬದಲಿಗೆ ಜಸ್‌ಪ್ರಿತ್ ಬುಮ್ರಾ ಹಾಗೂ ಶಿಖರ್ ಧವನ್‌ಗೆ ಅವಕಾಶ ನೀಡಲಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಹಾಗೂ ಭಾರತ 'ಎ' ತಂಡದ ಪರ ಇಂಗ್ಲೆಂಡ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಮೂರು ಪಂದ್ಯಗಳಿಗೆ ಪಂತ್ ಸ್ಥಾನ ಪಡೆದಿದ್ದರು.

ಕೇವಲ 23 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಪಂತ್‌ಗೆ 4 ಟ್ವೆಂಟಿ-20 ಪಂದ್ಯಗಳನ್ನು ಆಡಿದ ಅನುಭವವಿದೆ. ಇಂಗ್ಲೆಂಡ್ 'ಎ' ವಿರುದ್ಧ ಆಡಿದ 2 ಪ್ರಥಮದರ್ಜೆ ಪಂದ್ಯಗಳಲ್ಲಿ 67ರ ಸರಾಸರಿಯಲ್ಲಿ 2 ಅರ್ಧಶತಕ ಸಹಿತ 189 ರನ್ ಗಳಿಸಿದ್ದರು.

ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ದಿಲ್ಲಿ ಡೇರ್ ಡೆವಿಲ್ಸ್ ಪರ 14 ಪಂದ್ಯಗಳಲ್ಲಿ 684 ರನ್ ಗಳಿಸಿದ್ದರು. ಇದರಲ್ಲಿ 1 ಶತಕ ಹಾಗೂ 8 ಅರ್ಧಶತಕಗಳಿವೆ.

ಖಾಯಂ ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾದ ಹಿನ್ನೆಲೆಯಲ್ಲಿ ದಿನೇಶ್ ಕಾರ್ತಿಕ್ ಅಫ್ಘಾನಿಸ್ತಾನ ಹಾಗೂ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಭಾರತ ವಿಕೆಟ್‌ಕೀಪರ್ ಆಗಿ ನೇಮಕಗೊಂಡಿದ್ದರು.

3ನೇ ಟೆಸ್ಟ್‌ನಲ್ಲಿ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿರುವ ಭಾರತ 23 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದೆ. ಇಬ್ಬರು ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ಕೆ.ಎಲ್. ರಾಹುಲ್ ಔಟಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News