ಐಸಿಎಸ್ಇ ಹೇಗಿರುತ್ತದೆ?

Update: 2018-08-19 05:25 GMT

ಅಧ್ಯಯನ ಮತ್ತು ಅರಿವು

ಶಿಕ್ಷಣ ಹೂರಣ: ಭಾಗ 6

ಐಸಿಎಸ್‌ಇ (ಇಂಡಿಯನ್ ಸರ್ಟಿಫಿಕೇಟ್ ಆಪ್ ಸೆಕೆಂಡರಿ ಎಜುಕೇಶನ್) ಇದೂ ಕೂಡ ಸಿಬಿಎಸ್‌ಇ ರೀತಿಯಲ್ಲಿಯೇ ಸಮಗ್ರ ದೇಶದ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿ ರೂಪುಗೊಂಡಿದೆ. ಆದರೆ ಸಿಬಿಎಸ್‌ಇ ಗಿಂತಲೂ ಹೆಚ್ಚು ಸಂಕೀರ್ಣಕರವಾಗಿದೆ. ಇದು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸ್ಥಳೀಯ ಪರೀಕ್ಷೆಗಳ ಮಂಡಳಿ (ಸಿಂಡಿಕೇಟ್) ಆಗಿ ಮೊದಲು ರೂಪಿತವಾಯ್ತು. ಇದೂ ಕೂಡ ಸಿಬಿಎಸ್‌ಇ ಯಂತೆಯೇ ಹನ್ನೆರಡನೇ ತರಗತಿಯವರೆಗೂ ನಿಗಾ ವಹಿಸುತ್ತದೆ.

ಐಸಿಎಸ್‌ಇ ಪಠ್ಯ ಕ್ರಮವು ಎಲ್ಲಾ ವಿಷಯ ಗಳಿಗೂ ಸಮಾನವಾಗಿ ಮಾನ್ಯತೆಯನ್ನು ಕೊಡುವುದಲ್ಲದೇ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಅಧ್ಯಯನಕ್ಕೆ ತೊಡಗುವಂತೆ ಮಾಡುತ್ತದೆ. ಇದರ ಒಂದು ಹೆಗ್ಗಳಿಕೆಯೆಂದರೆ, ಇದರಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಕಲಿಕೆಯ ಆ ಶಕ್ತಿಯೂ ಇದ್ದು ಪ್ರಾರಂಭದಿಂದಲೂ ತಮ್ಮ ಜೀವನೋಪಾಯವನ್ನು ಅಥವಾ ವೃತ್ತಿಯನ್ನು ಹೇಗೆ ರೂಢಿಸಿಕೊಳ್ಳುವುದು ಎಂಬ ಚಿತ್ರಣವನ್ನು ಹೊಂದಿದ್ದರೆ ಅದನ್ನು ಸಾಧಿಸುವಲ್ಲಿ ಇದು ನೆರವಾಗುತ್ತದೆ. ಆದರೆ, ಇದು ಎಷ್ಟರಮಟ್ಟಿಗೆ ಆಸಕ್ತಿಕರವಾಗಿರುತ್ತದೋ ಅಷ್ಟೇ ಸಂಕೀರ್ಣವಾಗಿಯೂ ಇದೆ. ಅಧ್ಯಯನವೆಂಬುದು ಸಂಶೋಧನಾ ಹಂತಗಳಲ್ಲಿ ಸವಾಲಾಗುವುದು ಒಂದು ಸಹಜವಾದಂತಹ ವಿಷಯ. ಆದರೆ, ಮಕ್ಕಳ ಹಂತಕ್ಕೇ ಅದು ಸವಾಲಾಗುವುದು ಒಂದು ರೀತಿಯಲ್ಲಿ ಸರಿ, ಹಾಗೆಯೇ ಅವರಿಗೆ ಹೊರೆಯಾಗುವುದು ಎಂಬುದೂ ಕೂಡ ಸುಳ್ಳಲ್ಲ. ಐಸಿಎಸ್‌ಇ ಪಠ್ಯಕ್ರಮವು ಯಾವಾಗಲೂ ವಿದ್ಯಾರ್ಥಿಗಳು ಆಲೋಚಿಸಿ, ಅನ್ವಯಿಸುವಂತಹ ಕ್ರಮವನ್ನು ರೂಢಿಸಿಕೊಳ್ಳಲು ಹೆಚ್ಚು ಒತ್ತುಕೊಡುತ್ತದೆ. ಹಾಗೆಯೇ ಪಠ್ಯಕ್ರಮವನ್ನೂ, ಪರೀಕ್ಷಾಪದ್ಧತಿಯನ್ನೂ ಮತ್ತು ಪ್ರಶ್ನೆ ಪತ್ರಿಕೆಗಳನ್ನೂ ರೂಪಿಸುತ್ತದೆ.

ಐಸಿಎಸ್‌ಇ ಯ ಪಠ್ಯಕ್ರಮದಲ್ಲಿ ಓದಿರುವ ವಿದ್ಯಾರ್ಥಿಗಳನ್ನು ದೇಶದ ಅಥವಾ ವಿದೇಶದ ಶಾಲೆಗಳಲ್ಲಿ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಅನುಮೋದಿಸುತ್ತಾರೆ. ಅದು ನಿಜ. ಆದರೆ, ಅಂತಹ ಪ್ರತಿಭಾವಂತರ ಸೇವೆಗಳು ಅವರದೇ ನೆಲಕ್ಕಾಗುವುದು ಹೇಗೆ? ಇದು ನನ್ನ ಪ್ರಶ್ನೆ. ಶಾಲೆಯ ಹಂತದಲ್ಲಿಯೇ ಅವರು ಹದಿಮೂರು ವಿವಿಧ ವಿಷಯಗಳನ್ನು ಕಲಿಯಬೇಕಲ್ಲದೇ ಪ್ರತಿಯೊಂದಕ್ಕೂ ಅವರು ವಿಶೇಷ ಶ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಾಗೆಯೇ ಸಕಾರಾತ್ಮಕವಾಗಿ ನೋಡುವುದಾದರೆ ವಿಷಯಗಳ ಬಗ್ಗೆ ಸೂಕ್ಷ್ಮ ದೃಷ್ಟಿಯನ್ನು ಹೊಂದುವಂತೆ ಮಾಡುವುದು, ವಿಶ್ಲೇಷಣಾತ್ಮಕವಾಗಿ ತುಲನೆ ಮಾಡುವುದು, ಜೀವನ ಕೌಶಲ್ಯಗಳನ್ನು ಹೊಂದುವಂತೆ ಮಾಡುವುದಾದರೂ, ಐಸಿಎಸ್‌ಇ ಪರೀಕ್ಷೆಯಲ್ಲಿ ಬರುವ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸುವುದರಲ್ಲಿ ವಿದ್ಯಾರ್ಥಿಯ ಸಾಮರ್ಥ್ಯವನ್ನು ಅಳೆಯುವಂತೆ ಮಾಡಿಬಿಡುತ್ತಾರೆ. ಶಿಕ್ಷಣದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ, ಸಿಬಿಎಸ್‌ಇಗಿಂತ ಐಸಿಎಸ್‌ಸಿ ಉತ್ತಮವೆಂದು ಒಂದು ಸಮಗ್ರ ಅಭಿಪ್ರಾಯ. ಒಟ್ಟಾರೆ ಸಿಬಿಎಸ್‌ಇ ಆಗಲಿ, ಐಸಿಎಸ್‌ಇ ಆಗಲಿ ಎರಡರಲ್ಲೂ ಸಕಾರಾತ್ಮಕವಾಗಿರುವ ಹಾಗೆಯೇ ಋಣಾತ್ಮಕವಾಗಿರುವ ಅಂಶಗಳು ಇದ್ದೇ ಇವೆ. ಆದರೆ, ಯಾವುದರಲ್ಲೇ ಕಲಿತರೂ ಮಗುವಿನ ಜೀವನೋಪಾಯ ಮತ್ತು ವೃತ್ತಿ ಕೌಶಲ್ಯಕ್ಕೆ ಪೂರಕವಾಗಿರುವುದನ್ನು ಕೇಂದ್ರೀಕರಿಸಬೇಕು ಹಾಗೆಯೇ ಪ್ರಾದೇಶಿಕವಾದ ಜ್ಞಾನ ಮತ್ತು ತಿಳುವಳಿಕೆಯಂತೂ ಖಂಡಿತ ಇರಬೇಕು.

ವಿದ್ಯಾರ್ಥಿಗಳು ಐಸಿಎಸ್‌ಸಿ ಪರೀಕ್ಷೆಗಳಿಗೆ ವಿಶೇಷವಾಗಿ ತರಬೇತುಗೊಳ್ಳಬೇಕಾಗುತ್ತದೆ. ಏಕೆಂದರೆ,

1.ಹನ್ನೊಂದು ಪ್ರಶ್ನೆಪತ್ರಿಕೆಗಳಿಗೆ ಸಿದ್ಧವಾಗಬೇಕಾಗುತ್ತದೆ. ಇದರಿಂದ ಸಹಜವಾಗಿ ಒತ್ತಡವಿರುತ್ತದೆ.

2.ಪ್ರತಿಯೊಂದು ವಿಷಯಗಳ ಮೂಲ ತತ್ವಗಳನ್ನು ತಿಳಿದುಕೊಂಡು ಪ್ರತಿಯೊಂದರ ಪಠ್ಯ ಪುಸ್ತಕವನ್ನೂ ಓದಲೇ ಬೇಕಾಗುತ್ತದೆ. ಸಾಲದಕ್ಕೆ ಅವಕ್ಕೆ ಪೂರಕವಾಗಿರುವ ವಿಷಯಗಳಿರುವ ಇತರೇ ಪಠ್ಯ ಸಾಮಗ್ರಿಗಳನ್ನೂ ಕೂಡಾ ಅವರು ಅವಲೋಕಿಸಬೇಕಾಗುತ್ತದೆ. ಏಕೆಂದರೆ, ಪ್ರಶ್ನೆಗಳೇನನ್ನು ಕೇಳುತ್ತಾರೋ ಪಠ್ಯ ಪುಸ್ತಕಗಳಲ್ಲಿರುವಂತೆ ಅವು ನೇರವಾಗಿ ಇರುವುದಿಲ್ಲ. ವಿದ್ಯಾರ್ಥಿಗಳ ಅರ್ಥ ಮಾಡಿಕೊಳ್ಳುವ, ಅನ್ವಯಿಸುವ ಮತ್ತು ಗ್ರಹಿಕೆಯ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುವಂತಹ ಪ್ರಶ್ನೆಪತ್ರಿಕೆಗಳು ಅವಾಗಿರುತ್ತವೆ. ಅವು ವಿದ್ಯಾರ್ಥಿಗಳ ಗ್ರಹಣಶಕ್ತಿಯ ಮೇಲೆ ಆಧಾರಿತವಾಗಿರುತ್ತದೆಯೇ ಹೊರತು ಅವರ ಜ್ಞಾಪಕಶಕ್ತಿಯ ಮೇಲೆ ಆಧಾರಿತವಾಗಿರುವುದಿಲ್ಲ.

3.ಭಾಷಾ ವಿಷಯಗಳ ಮೇಲೆ ಹೆಚ್ಚಿನ ಗಮನ ಕೊಡಲಾಗುತ್ತದೆ. ಹಾಗೆ ಭಾಷಾಜ್ಞಾನದ ಮೇಲೆ ಒತ್ತು ಕೊಡುತ್ತಾ ವಿಶೇಷವಾಗಿ ಮಕ್ಕಳ ಪದಸಂಪತ್ತು ಮತ್ತು ವ್ಯಾಕರಣದ ಮೇಲೆ ಗಮನ ನೀಡಲಾಗುತ್ತದೆ. ಭಾಷೆಯಲ್ಲಿಯೂ ಕೂಡಾ ಆಲೋಚಿಸಿ ಅನ್ವಯಿಸಲಾಗುವಂತಹ ರೀತಿಯಲ್ಲಿಯೇ ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿರುತ್ತದೆ.

4. ವೌಲ್ಯಮಾಪನ ಮಾಡುವ ರೀತಿಯು ಬಹಳ ಕಟ್ಟುನಿಟ್ಟಾಗಿಯೂ, ನಿಷ್ಠುರವಾಗಿಯೂ ಇರುತ್ತದೆ. ಕೆಲವು ಬೋರ್ಡ್ ಪರೀಕ್ಷೆಗಳಲ್ಲಿ ಉತ್ತರಕ್ಕೆ ಪ್ರಯತ್ನಿಸಿದ ಕಾರಣಕ್ಕಾಗಿಯೇ ಅಂಕಗಳನ್ನು ಕಡಿತ ಮಾಡಿಯಾದರೂ ಕೊಡುವುದುಂಟು. ಆದರೆ, ಐಸಿಎಸ್‌ಸಿಯಲ್ಲಿ ಮುಖ್ಯಾಂಶಗಳನ್ನು ನೀಡದೇ ಎಷ್ಟೇ ವಿವರಣೆಗಳನ್ನು ನೀಡಿದ್ದರೂ ಪರಿಗಣಿಸಲಾಗುವುದಿಲ್ಲ.

5.ನಿಜವಾಗಿಯೂ ಯಾವ ಸಮೀಪ ತಂತ್ರಗಳೂ ಕೂಡಾ ಐಸಿಎಸ್‌ಸಿ ಪರೀಕ್ಷೆಗಳನ್ನು ಎದುರಿಸಲು ಇರುವುದಿಲ್ಲ. ಒಂದೇ ತಂತ್ರವೆಂದರೆ ನೇರವಾಗಿ ಅಧ್ಯಯನದಲ್ಲಿ ಶಿಸ್ತಾಗಿ ತೊಡಗುವುದು.

ಏನು ಮಾಡಬೇಕು?

ವಿದ್ಯಾರ್ಥಿಯು ತರಗತಿಯಲ್ಲಿ ಖಂಡಿತವಾಗಿ ಪಾಠಗಳನ್ನು ಕೇಳಿಸಿಕೊಳ್ಳಬೇಕು ಮತ್ತು ಅದಕ್ಕೆ ಸಂಬಂಧಿಸಿದ ಪ್ರಾಜೆಕ್ಟ್‌ಗಳನ್ನು ಮತ್ತು ಪುನರಾವರ್ತನೆಯ ಅಭ್ಯಾಸಗಳನ್ನು ಮಾಡಬೇಕು. ವಿದ್ಯಾರ್ಥಿಯು ಪಾಠ ಪ್ರವಚನಗಳು ನಡೆಯುವಾಗ ಎಚ್ಚೆತ್ತುಕೊಂಡಿರಲು ಕೆಲವು ಅಭ್ಯಾಸಗಳನ್ನು ಪ್ರಾರಂಭದಿಂದಲೇ ಮಾಡಿಸಬೇಕು. ಅವೇನೆಂದರೆ, ಮುಖ್ಯವಾದಂತಹ ಅಂಶಗಳನ್ನು ಕೇಳು ಕೇಳುತ್ತಲೇ ತಾನೇ ಬರೆದುಕೊಳ್ಳುವುದು. ರನ್ನಿಂಗ್ ನೋಟ್ಸ್ ತೆಗೆದುಕೊಳ್ಳುವಂತಹ ಅಭ್ಯಾಸವು ಮಗುವಿಗೆ ಯಾವಾಗಲೂ ಸಹಕಾರಿಯಾಗಿರುತ್ತದೆ. ಏಕೆಂದರೆ, ಕೇಳುತ್ತಾ ಕೂತುಕೊಳ್ಳುವುದೆಂದರೆ ಅದೊಂದು ಜಡಾತ್ಮಕವಾದ ಅನುಭವ. ಹಾಗೆಯೇ ಮಗುವು ಕೇಳುತ್ತಾ ಕೇಳುತ್ತಾ ಏಕಾಗ್ರತೆಯನ್ನು ಕಳೆದುಕೊಂಡು ಎತ್ತೆತ್ತಲೋ ಮನಸನ್ನು ಹರಿಯಬಿಡುವುದು ತೀರಾ ಸಾಮಾನ್ಯವಾಗಿರುತ್ತದೆ. ಆದರೆ, ರನ್ನಿಂಗ್ ನೋಟ್ಸ್ ಅಥವಾ ಕೇಳುವಾಗಲೇ ಮುಖ್ಯಾಂಶಗಳನ್ನು ಗುರುತಿಸುವುದು ಅಥವಾ ಟಿಪ್ಪಣಿ ಹಾಕಿಕೊಳ್ಳುವುದು; ಇತ್ಯಾದಿಯಾಗಿ ಚಟುವಟಿಕೆಯಿಂದ ಇದ್ದರೆ ಮಗುವು ಸಹಜವಾಗಿ ಎಚ್ಚರದಲ್ಲಿಯೂ ಮತ್ತು ಗಮನಪೂರ್ಣವಾಗಿಯೂ ಇರುವುದು. ತನಗೆ ಏನೇ ಅನುಮಾನ ಬಂದರೂ ಅದನ್ನು ಬರೆದಿಟ್ಟುಕೊಂಡು ತರಗತಿಯ ಕೊನೆಯ ಭಾಗದಲ್ಲಿ ಕೇಳುವಂತಹ ಅಭ್ಯಾಸವು ನಿಜಕ್ಕೂ ಪ್ರಯೋಜನಕಾರಿ.

ಓದುವುದನ್ನು ಅಥವಾ ಅಧ್ಯಯನ ಮಾಡಿ ಬರೆದಿಡುವುದನ್ನು, ಹಾಗೂ ಅಧ್ಯಯನಕ್ಕೆ ಪೂರಕವಾಗಿರುವ ಪ್ರಾಜೆಕ್ಟ್‌ಗಳನ್ನು ಮಾಡುವುದನ್ನು ಮುಂದೂಡುವುದನ್ನು ಎಂದಿಗೂ ಮಾಡಬಾರದು. ಏಕೆಂದರೆ, ಸೋಮಾರಿತನ ಅಥವಾ ಜಡತ್ವ ಅಭ್ಯಾಸ ಆಗುವುದರ ಜೊತೆಗೆ ಮುಂದೆ ಮಾಡಬೇಕಾದ ಕೆಲಸಗಳ ಸಂಖ್ಯೆಯು ಹೆಚ್ಚುತ್ತಾ ಹೋಗಿ ಯಾವುದನ್ನೂ ಮಾಡಲಾಗದಂತಹ ಸ್ಥಿತಿಗೆ ಮಕ್ಕಳು ಬಂದುಬಿಡುತ್ತಾರೆ.

ಪ್ರತಿಯೊಂದು ವಾರವೂ ಎರಡೆರಡು ವಿಷಯವನ್ನು ಐಸಿಎಸ್‌ಸಿ ಯಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಇದರ ಮೂಲಕ ಅವರು ಅಂತಿಮ ಸುತ್ತಿನ ಪರೀಕ್ಷೆಯ ಹೊತ್ತಿಗೆ ಸಂಪೂರ್ಣ ಸಿದ್ಧವಾಗಿರುವಂತೆ ನೋಡಿಕೊಳ್ಳುವುದು ಶಿಕ್ಷಕರ ಕೆಲಸ. ಸಣ್ಣ ಸಣ್ಣ ಘಟಕ ಪರೀಕ್ಷೆಗಳಲ್ಲಿ ಅರ್ಥ ಮಾಡಿಕೊಂಡು ಬರೆಯುವ ಮಕ್ಕಳಿಗೆ ನಿಜಕ್ಕೂ ಮುಂದಿನ ದೊಡ್ಡ ಪರೀಕ್ಷೆಗಳು ಹೆಚ್ಚೇನೂ ಕಷ್ಟಕರವೆಂದು ಅನಿಸುವುದಿಲ್ಲ. ನಿಜ ಹೇಳುವುದಾದರೆ ಇದು ಮಕ್ಕಳು ತಮ್ಮನ್ನು ತಾವೇ ತಿಳಿದುಕೊಂಡು ಮುಂದುವರಿಯಲು ಸಹಕರಿಸುತ್ತದೆ.

ಐಸಿಎಸ್‌ಸಿ ಮಕ್ಕಳಿಗೆ ಕೆಲವು ಸೂಚನೆಗಳು

1.ವಿಷಯವನ್ನು ಜ್ಞಾಪಕ ಇಟ್ಟುಕೊಳ್ಳುವುದಕ್ಕಿಂತ ಮುಖ್ಯವಾಗಿ ಅದನ್ನು ಅರಿತುಕೊಳ್ಳುವ, ಅರ್ಥ ಮಾಡಿಕೊಳ್ಳುವ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು.

2.ಪ್ರತಿಯೊಂದು ಕಲಿಕೆಯ ಅಂಶವನ್ನು ಪ್ರಶ್ನಾರ್ಥಕವಾಗಿಯೂ ಮತ್ತು ಆಂಶಿಕವಾಗಿಯೂ ಗುರುತಿಸುವುದನ್ನು ಕಲಿಯಬೇಕು.

3.ಒಂದೊಂದು ಅಂಶಗಳು ಏನೆಂದು ತಿಳಿದುಕೊಂಡರೂ ಅವು ಸಮಗ್ರವಾಗಿ ಏನನ್ನು ಹೇಳುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು.

4.ವಿಷಯವನ್ನು ಆಮೂಲಾಗ್ರವಾಗಿಯೇ ತಿಳಿದುಕೊಳ್ಳ ಬೇಕಾಗಿದ್ದರೂ ಪ್ರಬಂಧ ರೂಪದಲ್ಲಿ ಬರೆಯುವಂತಹ ಉತ್ತರವನ್ನು ಮೂರು ನಾಲ್ಕು ಪ್ರಶ್ನೆಗಳ ಉತ್ತರದ ರೂಪದಲ್ಲಿ ಮಂಡಿಸಬೇಕಾಗುತ್ತದೆ. ಆದ್ದರಿಂದ ವಿಷಯವನ್ನು ಭಾಗಗಳಲ್ಲಿ ಕಲಿತರೂ, ಅವುಗಳೆಲ್ಲವನ್ನೂ ಸಮಗ್ರವಾಗಿ, ಕ್ರೋಡೀಕರಿಸಿ ಪ್ರಸ್ತುತಪಡಿಸುವ ನೈಪುಣ್ಯವನ್ನು ಅಥವಾ ಅರ್ಥವಂತಿಕೆಯನ್ನು ಬೆಳೆಸಿಕೊಳ್ಳಬೇಕು.

5.ಕಲಿಕೆಯೊಂದು ಕ್ರಿಯೆಯಾಗದೇ ಪ್ರಕ್ರಿಯೆಯನ್ನಾಗಿಸಿ ಕೊಂಡರೇನೇ ಐಸಿಎಸ್‌ಸಿ ಪರೀಕ್ಷೆಗಳನ್ನು ಸರಾಗವಾಗಿ ಎದುರಿಸಲು ಸಾಧ್ಯ.

6.ಯಾವ ಮಾದರಿಯ ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಯಾವ ಬಗೆಯ ಉತ್ತರಗಳನ್ನು ನಿರೀಕ್ಷಿಸುತ್ತಾರೆ ಎಂಬುದರ ಅರಿವು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಇರಬೇಕು.

ಪ್ರತಿಯೊಂದು ವಿಷಯದಲ್ಲಿಯೂ ಕೆಲವೊಂದು ಅಂಶಗಳನ್ನು ಗಮನಿಸಲೇ ಬೇಕಾಗುತ್ತದೆ.

1.ಇಂಗ್ಲಿಷ್: ವಿದ್ಯಾರ್ಥಿಯು ತನ್ನ ಭಾಷಾ ಜ್ಞಾನವನ್ನು ಶಬ್ದ ಸಂಪತ್ತಿನಿಂದಲೂ ಮತ್ತು ವ್ಯಾಕರಣದ ಸ್ಪಷ್ಟತೆಯಿಂದಲೂ ವ್ಯಕ್ತಪಡಿಸಬೇಕಾಗುತ್ತದೆ. ವ್ಯಾಕರಣ ದೋಷವಾಗಲಿ, ಕಾಗುಣಿತ ತಪ್ಪಾಗಲಿ ಇರಬಾರದು. ಗದ್ಯವಾಗಲಿ, ಪದ್ಯವಾಗಲಿ ಚೆನ್ನಾಗಿ ಓದಿಕೊಂಡಿದ್ದು ಅದನ್ನು ಸಮಗ್ರವಾಗಿ ತಿಳಿದುಕೊಂಡಿದ್ದರೆ ಮಾತ್ರವೇ ಮಗುವು ನಿರರ್ಗಳವಾಗಿ ತನ್ನ ಭಾಷೆಯಲ್ಲಿ ವ್ಯಕ್ತಪಡಿಸಲು ಸಾಧ್ಯ.

2.ದ್ವಿತೀಯ ಭಾಷೆ: ಇಂಗ್ಲಿಷ್ ಮೊದಲನೆಯ ಭಾಷೆಯಾಗಿದ್ದು, ಎರಡನೆಯ ಭಾಷೆ ಹಿಂದಿ ಅಥವಾ ಯಾವುದೇ ತೆಗೆದುಕೊಂಡಿದ್ದರೂ ಅರ್ಥಪೂರ್ಣವಾದ ಶಬ್ದವನ್ನು ಬಳಸಲು ಕಲಿತಿರಬೇಕು. ಹಾಗೆಯೇ ಯಾವುದೇ ವ್ಯಾಕರಣ ದೋಷವೂ ಇದರಲ್ಲಿ ಇರಕೂಡದು. ವಾಕ್ಯ ರಚನೆಯಲ್ಲಿ ಮತ್ತುಪದ ಜೋಡಣೆಯಲ್ಲಿ ಅಸಂಬದ್ಧತೆ ಇದ್ದಲ್ಲಿ ಅಂಕಗಳನ್ನು ಕಳೆದುಕೊಳ್ಳುತ್ತಾರೆ.

3.ಗಣಿತ: ಜ್ಯಾಮಿತಿಯ ರಚನೆಗಳು, ರೇಖಾಗಣಿತ, ಅಂಕಗಣಿತ, ಅಂಕಿಅಂಶಗಳ ತುಲನೆ (ಸ್ಟಾಟಿಸ್ಟಿಕ್ಸ್) ಇತ್ಯಾದಿಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಬಹುದು. ಮಾದರಿ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕರಾರುವಾಕ್ಕಾಗಿ ಮತ್ತು ಶೀಘ್ರವೇ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಸೂತ್ರಗಳಾಧಾರಿತವಾದ ಲೆಕ್ಕಗಳನ್ನು ಹಂತಹಂತಗಳಲ್ಲಿ ಬಿಡಿಸುವುದರಲ್ಲಿ ಎಲ್ಲಿಯೂ ಎಡವಬಾರದು. ಇತರ ಪಠ್ಯಕ್ರಮಗಳಲ್ಲಿರುವಂತೆಯೇ ಇದರಲ್ಲಿಯೂ ವಿಜ್ಞಾನದಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರವೇ ಇರುವ ವಿಷಯಗಳು. ಹಾಗೆಯೇ ಸಮಾಜ ವಿಜ್ಞಾನದಲ್ಲಿ ಇತಿಹಾಸ, ಪೌರನೀತಿ ಮತ್ತು ಭೂಗೋಳ ಶಾಸ್ತ್ರಗಳಿವೆ. ಜೊತೆಗೆ ಕಂಪ್ಯೂಟರ್ ಅಪ್ಲಿಕೇಶನ್, ಪರಿಸರ ವಿಜ್ಞಾನಗಳೂ ಕೂಡ ಇದರ ಕಡ್ಡಾಯ ವಿಷಯಗಳು. ಇವುಗಳೆಲ್ಲದರ ಜೊತೆಗೆ ಪ್ರಾಜೆಕ್ಟ್‌ಗಳನ್ನು ಸರಿಯಾಗಿ ಮತ್ತು ನಿಖರವಾಗಿ ಮಾಡುವುದರಿಂದಲೂ ಕೂಡಾ ಅಂಕಗಳನ್ನು ಗಳಿಸಲು ಸಾಧ್ಯವಾಗುವುದು. ಒಟ್ಟಾರೆ ಏನೇ ಆಗಲಿ, ಮಗುವಿಕೆ ಕಲಿಕೆಯೆಂಬುದು ಒತ್ತಡದ ಕ್ರಿಯೆಗೊಳಗಾಗುವುದು ಆಗಬಾರದು. ನಿರಂತರ ಕಲಿಕೆಯ ಪ್ರಕ್ರಿಯೆಗೆ ಒತ್ತಡ ರಹಿತವಾಗಿರಬೇಕು ಎಂಬುದು ಶಿಕ್ಷಕರು ಮತ್ತು ಪೋಷಕರು ಅರಿತುಕೊಂಡರೆ ಸಾಕು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News