ಕೊಚ್ಚಿ ನೌಕಾನೆಲೆ ಏರ್‌ಪೋರ್ಟ್‌ನಿಂದ ವಿಮಾನ ಕಾರ್ಯಾಚರಣೆಗೆ ಅವಕಾಶ

Update: 2018-08-20 06:28 GMT

ತಿರುವನಂತಪುರ, ಆ.20: ಕೊಚ್ಚಿ ನೌಕಾಪಡೆಯ ಐಎನ್‌ಎಸ್ ಗರುಡಾ ವಾಯುನೆಲೆಯ ವಿಮಾನನಿಲ್ದಾಣದಿಂದ ಸೋಮವಾರ ಬೆಳಗ್ಗೆ ವಾಣಿಜ್ಯ ವಿಮಾನಗಳ ಕಾರ್ಯಾಚರಣೆಗೆ ಅವಕಾಶ ನೀಡಲಾಗಿದೆ. ಇಂದು ಬೆಳಗ್ಗೆ ಬೆಂಗಳೂರಿನಿಂದ ಏರ್ ಇಂಡಿಯಾ ವಿಮಾನ ಕೊಚ್ಚಿ ನೌಕಾ ನೆಲೆಗೆ ಬಂದಿಳಿದಿದೆ.

 ಕೊಚ್ಚಿ ಅಂತರ್‌ರಾಷ್ಟ್ರೀಯ ವಿಮಾನನಿಲ್ದಾಣ ಸುತ್ತಮುತ್ತ ನೆರೆ ಪರಿಸ್ಥಿತಿ ಉಂಟಾದ ಕಾರಣ ಏರ್‌ಪೋರ್ಟ್‌ನ್ನು ಆ.26ರ ತನಕ ಮುಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಎರಡು ದಶಕಗಳ ಬಳಿಕ ಮೊದಲ ಬಾರಿ ನೌಕಾಪಡೆಯ ಐಎನ್‌ಎಸ್ ಗರುಡ ವಾಯುನೆಲೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿದೆ. ಸಣ್ಣ ವಿಮಾನಗಳು ನೌಕಾ ನೆಲೆಯ ಏರ್‌ಪೋರ್ಟ್‌ನಿಂದ ಕಾರ್ಯಾಚರಣೆ ನಡೆಸಲಿವೆ.

ಇಂದು ಬೆಳಗ್ಗೆ ಬೆಂಗಳೂರಿನಿಂದ ಏರ್‌ಇಂಡಿಯಾ ವಿಮಾನ ಆಗಮಿಸಿ, 8:30ಕ್ಕೆ ವಾಪಸಾಗಿದೆ. ರಾಜ್ಯ ರಾಜಧಾನಿ ತಿರುವನಂತಪುರ ಹಾಗೂ ಎರ್ನಾಕುಲಂ ನಡುವೆ ರೈಲು ಸೇವೆಗಳು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.

ಪ್ರವಾಹದಿಂದ ತತ್ತರಿಸಿರುವ ಜನರು ತಮ್ಮ ಸ್ನೇಹಿತರ ಹಾಗೂ ಸಂಬಂಧಿಕರ ಮನೆಗಳಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಜನಸಂಚಾರ ದಟ್ಟಣೆ ಹೆಚ್ಚಾಗಿದೆ.

ಆ.8ರಿಂದ ಆರಂಭವಾದ ಮಾರಣಾಂತಿಕ ಮಹಾಮಳೆಗೆ ಈಗಾಗಲೇ 210 ಜನರು ಸಾವನ್ನಪ್ಪಿದ್ದಾರೆ. 7.14 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News