ಗಾಜಿನ ಮೇಲ್ಛಾವಣಿಯಿರುವ ಈ ಸುಸಜ್ಜಿತ ರೈಲ್ವೆ ಬೋಗಿ ಎಲ್ಲಿಗೂ ಹೋಗುತ್ತಿಲ್ಲ....!

Update: 2018-08-20 11:28 GMT

ಕಾಶ್ಮೀರದಲ್ಲಿ ಸಹಜ ಸ್ಥಿತಿ ಎಂದು ಮರಳುತ್ತದೋ,ಈ ಭೂಸ್ವರ್ಗಕ್ಕೆ ಪ್ರವಾಸಿಗಳು ಎಂದು ಬರುತ್ತಾರೋ ಎಂದು ಬಡ್ಗಾಮ್ ರೈಲ್ವೆ ನಿಲ್ದಾಣದಲ್ಲಿರುವ,ದೇಶಿಯವಾಗಿ ನಿರ್ಮಾಣಗೊಂಡಿರುವ, ಗಾಜಿನ ಮೇಲ್ಛಾವಣಿಯನ್ನು ಹೊಂದಿರುವ ಈ ಸುಸಜ್ಜಿತ ರೈಲು ಬೋಗಿ ‘ವಿಸ್ಟಾಡೋಮ್’ ತಿಂಗಳುಗಳಿಂದಲೂ ಕಾಯುತ್ತಿದೆ.

ಕಳೆದ ವರ್ಷವೇ ಚಾಲನೆ

40 ಜನರು ಆರಾಮವಾಗಿ ಕುಳಿತು ಪ್ರಯಾಣಿಸಬಹುದಾದ ವಿಸ್ಟಾಡೋಮ್ ಸೌಲಭ್ಯವನ್ನು ರೈಲ್ವೆ ಸಚಿವ ಸುರೇಶ ಪ್ರಭು ಅವರು ಕಳೆದ ವರ್ಷದ ಜೂನ್‌ನಲ್ಲಿ ಪ್ರಕಟಿಸಿದ್ದರು. ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಸುಮಾರು ನಾಲ್ಕು ಕೋಟಿ ರೂ.ವೆಚ್ಚದಲ್ಲಿ ಈ ಬೋಗಿಯನ್ನು ನಿರ್ಮಿಸಿದೆ.

ಕಾಶ್ಮೀರದಲ್ಲಿ ಇದೇ ಮೊದಲು

ಬೃಹತ್ ಗಾಜಿನ ಕಿಡಕಿಗಳು,ಗಾಜಿನ ಮೇಲ್ಛಾವಣಿ,ನಿರೀಕ್ಷಣಾ ಲಾಂಜ್ ಮತ್ತು ವೃತ್ತಾಕಾರದಲ್ಲಿ ತಿರುಗಬಲ್ಲ ಆಸನಗಳನ್ನು ಹೊಂದಿರುವ ಈ ಸೀ ಥ್ರೂ ವಾತಾನುಕೂಲಿತ ಬೋಗಿಯು ರಾಜ್ಯದಲ್ಲಿ ಇಂತಹ ಮೊದಲ ಸೇವೆಯಾಗಿದೆ. ಬನಿಹಾಲ್‌ನಿಂದ ಬಾರಾಮುಲ್ಲಾದವರೆಗಿನ 135 ಕಿ.ಮೀ.ದೂರದ ಪ್ರಯಾಣದಲ್ಲಿ ಪ್ರವಾಸಿಗಳಿಗೆ ರಮಣೀಯ ನಿಸರ್ಗ ತಾಣಗಳನ್ನು ತೋರಿಸುವುದು ಈ ಸೌಲಭ್ಯದ ಉದ್ದೇಶವಾಗಿದೆ.

ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಆಹಾರ ಸೇವನೆಗಾಗಿ ವಿಮಾನಗಳಲ್ಲಿರುವಂತೆ ಆಸನಗಳಿಗೆ ಟ್ರೇಗಳನ್ನು ಅಳವಡಿಸಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ನಡುವೆ ಲಘು ಊಟಗಳನ್ನು ಮಾಡಬಹುದಾದ ವ್ಯವಸ್ಥೆಯಿದೆ.

ಸಂಚರಿಸಿದ್ದು ಒಂದೇ ಬಾರಿ

ವಿಸ್ಟಾಡೋಮ್ ಈ ವರ್ಷದ ಎಪ್ರಿಲ್‌ನಲ್ಲಿ ಚೆನ್ನೈನಿಂದ ಬಡ್ಗಾಮ್ ನಿಲ್ದಾಣವನ್ನು ತಲುಪಿತ್ತು. ಪ್ರವಾಸಿಗಳು ಕಾಶ್ಮೀರ ಕಣಿವೆಯ ಸೌಂದರ್ಯವನ್ನು ಸವಿಯಲು ಇದನ್ನು ಮೇ ತಿಂಗಳಲ್ಲಿ ಸಂಚಾರಕ್ಕಿಳಿಸುವ ನಿರೀಕ್ಷೆಯಿತ್ತು. ಆದರೆ ಕಣಿವೆಯಲ್ಲಿನ ಪ್ರಚಲಿತ ಸ್ಥಿತಿ ಇದಕ್ಕೆ ಅವಕಾಶ ನೀಡಿರಲಿಲ್ಲ ಮತ್ತು ಬೋಗಿಯಿನ್ನೂ ಪರಿಸ್ಥಿತಿಯ ಸುಧಾರಣೆಗಾಗಿ ನಿಲ್ದಾಣದಲ್ಲಿಯೇ ಕಾಯುತ್ತಿದೆ. ವಿಸ್ಟಾಡೋಮ್‌ನ ವೈಶಿಷ್ಟಗಳು

 ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ವಿಸ್ಟಾಡೋಮ್ ಎರಡು ಪಟ್ಟು ಅಗಲವಾದ ಹಿಂದಕ್ಕೆ ಬಾಗಬಲ್ಲ ಆಸನಗಳನು ಹೊಂದಿದ್ದು,ಇವು 360 ಡಿಗ್ರಿ ಕೋನದಲ್ಲಿ ತಿರುಗುವ ಮೂಲಕ ಕುಳಿತಲ್ಲಿಂದಲೇ ಸುತ್ತುಮುತ್ತಲಿನ ದೃಶ್ಯಗಳನ್ನು ಆಸ್ವಾದಿಸಲು ಅನುಕೂಲ ಕಲ್ಪಿಸುತ್ತವೆ. ಗಾಜಿನ ಕಮಾನಾಕೃತಿಯ ಛಾವಣಿ, ಸ್ವಯಂಚಾಲಿತ ಜಾರುವ ಬಾಗಿಲುಗಳು,ಲಗ್ಗೇಜ್‌ಗಳನ್ನು ಇಡಲು ರ್ಯಾಕ್‌ಗಳು, ಮನೋರಂಜನೆಗಾಗಿ ಹಲವಾರು ಎಲ್‌ಇಡಿ ಸ್ಕ್ರೀನ್‌ಗಳು ಮತ್ತು ಜಿಪಿಎಸ್ ಬೆಂಬಲದ ಮಾಹಿತಿ ವ್ಯವಸ್ಥೆ ಇವೆಲ್ಲವೂ ಈ ಸುಸಜ್ಜಿತ ಬೋಗಿಯಲ್ಲಿವೆ. ಆದರೆ ಬೋಗಿ ಮಾತ್ರ ಇದ್ದಲ್ಲಿಂದ ಕದಲುತ್ತಿಲ್ಲ!

ಪ್ರವಾಸೋದ್ಯಮಕ್ಕೆ ಉತ್ತೇಜನ

 ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ವಿಸ್ಟಾಡೋಮ್ ಬೋಗಿಯನ್ನು ಕಳೆದ ವರ್ಷದ ಎಪ್ರಿಲ್‌ನಲ್ಲಿ ಮೊದಲ ಬಾರಿಗೆ ಅರಕು ಕಣಿವೆಯ ಸೌಂದರ್ಯ ವೀಕ್ಷಣೆಗಾಗಿ ವಿಶಾಖಪಟ್ಟಣಂ-ಕಿರಂದುಲ್ ಪ್ಯಾಸೆಂಜರ್ ರೈಲಿಗೆ ಅಳವಡಿಸಲಾಗಿತ್ತು. ಹಲವಾರು ಸುರಂಗಗಳ ಮೂಲಕ ಹಾದುಹೋಗುತ್ತ ಬೆಟ್ಟಗಳು ಮತ್ತು ಕಣಿವೆಗಳು ಸೇರಿದಂಂತೆ ಅದ್ಭುತ ಪ್ರಕೃತಿ ಸೌಂದರ್ಯವನ್ನು ಈ ಬೋಗಿಯ ಪ್ರಯಾಣಿಕರು ಆಸ್ವಾದಿಸುತ್ತಿದ್ದಾರೆ. ಎರಡನೇ ವಿಸ್ಟಾಡೋಮ್ ಬೋಗಿಯನ್ನು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಮುಂಬೈ-ಗೋವಾ ಮಾರ್ಗದಲ್ಲಿ ಜನಶತಾಬ್ದಿ ರೈಲಿಗೆ ಮಡಗಾಂವ್-ದಾದರ್ ನಡುವೆ ಅಳವಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News