×
Ad

ಕೊಡಗಿನ ನಿರಾಶ್ರಿತರಿಗೆ ಬಿಜೆಪಿ ಜನಪ್ರತಿನಿಧಿಗಳ ಒಂದು ದಿನದ ವೇತನ: ಯಡಿಯೂರಪ್ಪ

Update: 2018-08-20 19:15 IST

ಬೆಂಗಳೂರು, ಆ. 20: ಸತತ ಮಳೆ, ಪ್ರವಾಹ ಹಾಗೂ ಗುಡ್ಡ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗಿನ ನಿರಾಶ್ರಿತರಿಗೆ ಬಿಜೆಪಿ ಶಾಸಕರು, ಮೇಲ್ಮನೆ ಸದಸ್ಯರು, ಹಾಗೂ ಸಂಸದರ ಒಂದು ದಿನದ ವೇತನವನ್ನು ಸಿಎಂ ಪರಿಹಾರ ನಿಧಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಊಹೆಗೂ ನಿಲುಕದಷ್ಟು ಹಾನಿಯುಂಟಾಗಿದ್ದು, ಜಿಲ್ಲೆಯ ಜನರು ತಮ್ಮ ಸಹಜ ಜೀವನಕ್ಕೆ ಮರಳಲು ಹೆಣಗಾಡುತ್ತಿದ್ದಾರೆ. ತಮ್ಮ ಮನೆ ಆಸ್ತಿ ಎಲ್ಲವನ್ನು ಕಳೆದುಕೊಂಡಿರುವ ಜನರ ನೆರವಿಗೆ ಧಾವಿಸುವುದು ನಮ್ಮ ಪ್ರಥಮ ಕರ್ತವ್ಯ ಎಂದು ಅವರು ಹೇಳಿದ್ದಾರೆ.

ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಜನರಿಗೆ ಸಮರೋಪಾದಿಯಲ್ಲಿ ಶಾಶ್ವತ ನೆಲೆಯನ್ನು ಒದಗಿಸಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮತ್ತಷ್ಟು ಚುರುಕಾಗಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಯಡಿಯೂರಪ್ಪ ಒತ್ತಾಯ ಮಾಡಿದ್ದಾರೆ.

ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಕೇಂದ್ರ ಸರಕಾರದಿಂದಲೂ ನೆರವು ಒದಗಿಸಲು ಪ್ರಯತ್ನಿಸಲಾಗುವುದು. ರಾಜ್ಯ ಸರಕಾರವೂ ತಕ್ಷಣವೇ ಈ ಸಂಬಂಧ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತರಬೇಕು. ಸಾರ್ವಜನಿಕರು ಪರಿಹಾರ ನಿಧಿಗೆ ಉದಾರ ಧನ ಸಹಾಯ ಮಾಡಬೇಕು ಎಂದು ಪ್ರಕಟಣೆಯಲ್ಲಿ ಬಿಎಸ್‌ವೈ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News