ಮನೆ ಕಳೆದುಕೊಂಡ ನಿರಾಶ್ರಿತರಿಗೆ ‘ಪ್ರೀ ಫ್ಯಾಬ್ರಿಕ್’ ಮನೆ ನಿರ್ಮಾಣ: ಉಪ ಮುಖ್ಯಮಂತ್ರಿ ಪರಮೇಶ್ವರ್

Update: 2018-08-20 13:58 GMT

ಬೆಂಗಳೂರು, ಆ. 20: ಕೊಡಗು ಜಿಲ್ಲೆಯಲ್ಲಿನ ಸತತ ಮಳೆ, ಪ್ರವಾಹ ಹಾಗೂ ಗುಡ್ಡ ಕುಸಿತದಿಂದ ಮನೆ ಕಳೆದುಕೊಂಡ ನಿರಾಶ್ರಿತರಿಗೆ ‘ಪ್ರೀ ಫ್ಯಾಬ್ರಿಕ್’ ಮನೆ ನಿರ್ಮಿಸಿ ಕೊಡಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಸೋಮವಾರ ಸದಾಶಿವನಗರದಲ್ಲಿನ ಬಿಡಿಎ ಕ್ವಾಟ್ರರ್ಸ್‌ನಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ವತಿಯಿಂದ ಸಂತ್ರಸ್ತರಿಗೆ ಆಹಾರ ಪದಾರ್ಥ ಮತ್ತಿತರ ಸಾಮ್ರಗಿಗಳನ್ನು ಹೊತ್ತ ಟ್ರಕ್‌ಗಳಿಗೆ ಹಸಿರು ನಿಶಾನೆ ತೋರಿಸಿದ ಬಳಿಕ ಅವರು ಮಾತನಾಡುತ್ತಿದ್ದರು.

ಮಳೆ ನಿಂತ ನಂತರ ಮನೆ ಕಳೆದುಕೊಂಡಿರುವವರ ಮಾಹಿತಿ ಸಂಗ್ರಹಿಸಿ ಕೇವಲ ಒಂದೇ ದಿನದೊಳಗೆ ನಿರ್ಮಾಣ ಮಾಡಿಕೊಡಬಹುದಾದಂತಹ ಪ್ರೀ ಫ್ಯಾಬ್ರಿಕ್ ಮಾದರಿಯ ಮನೆಗಳನ್ನು ನಿರಾಶ್ರಿತರಿಗೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.

ಮನೆ ಕಳೆದುಕೊಂಡವರಿಗೆ ತತ್‌ಕ್ಷಣವೇ ಮನೆ ಒದಗಿಸಬೇಕಿದೆ. ಆದುದರಿಂದ ಪ್ರೀ ಫ್ಯಾಬ್ರಿಕ್ ಮನೆ ನಿರ್ಮಾಣ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜತೆ ಸಮಾಲೋಚನೆ ನಡೆಸಲಾಗಿದೆ ಎಂದ ಅವರು, ಮಳೆ ನಿಂತ ಕೂಡಲೇ ಮನೆ ನಿರ್ಮಾಣಕ್ಕೆ ಸರಕಾರ ಕಾರ್ಯ ಪ್ರವೃತ್ತವಾಗಲಿದೆ ಎಂದರು.

ಪೂರ್ವ ನಿಗದಿ ಕಾರ್ಯ: ಮಳೆ-ಪ್ರವಾಹ ಸಂದರ್ಭದಲ್ಲಿ ಸಿಂಗಾಪುರ ಪ್ರವಾಸ ಪೂರ್ವ ನಿಗದಿಯಾಗಿತ್ತು. ಆ ಹಿನ್ನೆಲೆಯಲ್ಲಿ ತಾನು ವಿದೇಶಕ್ಕೆ ತೆರಳಿದ್ದೆ. ಆದರೂ, ರಾಜ್ಯದ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ ಎಂದು ಪರಮೇಶ್ವರ್, ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸ್ಪಷ್ಟಣೆ ನೀಡಿದರು.

ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಲೋಕೋಪಯೋಗಿ ಸಚಿವ ರೇವಣ್ಣ ಅನುಚಿತ ವರ್ತನೆ ಮಾಡಲು ಸಾಧ್ಯವಿಲ್ಲ. ನಿರಾಶ್ರಿತರ ಬಗ್ಗೆ ಹೆಚ್ಚಿನ ಕಾಳಜಿಯನ್ನು ಅವರು ಹೊಂದಿದ್ದು, ಹಾಸನ ಒಕ್ಕೂಟದಿಂದ ಹಾಲು ಸೇರಿದಂತೆ ಆಹಾರ ಪದಾರ್ಥಗಳನ್ನು ಒದಗಿಸಿದ್ದಾರೆ ಎಂದು ಸಮರ್ಥಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News