ದೇಶದಲ್ಲಿ ವೈಜ್ಞಾನಿಕ ಚಿಂತಕರಿಗೆ ಅಭದ್ರತೆಯಿದೆ: ನಿವೃತ್ತ ನ್ಯಾ.ಗೋಪಾಲಗೌಡ

Update: 2018-08-20 14:29 GMT

ಬೆಂಗಳೂರು, ಆ.20: ವೈಜ್ಞಾನಿಕ ಮನೋಭಾವವುಳ್ಳವರನ್ನು ದಮನ ಮಾಡುವಂತುಹ ಕಾರ್ಯ ಎಗ್ಗಿಲ್ಲದೆ ನಡೆದಿದ್ದು, ಇದರ ವಿರುದ್ಧ ಸಂಘಟಿತರಾಗಬೇಕಾದ ಅಗತ್ಯವಿದೆ ಎಂದು ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ತಿಳಿಸಿದರು.

ಸೋಮವಾರ ಭಾರತ ಜ್ಞಾನ ವಿಜ್ಞಾನ ಸಮಿತಿ ನಗರದ ಸರಕಾರಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ವೈಜ್ಞಾನಿಕ ಚಿಂತಕರಿಗೆ ಅಭದ್ರತೆಯಿದ್ದು, ಸದಾ ಅಪಾಯದ ಅಂಚಿನಲ್ಲಿಯೆ ಜೀವನ ದೂಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ವೈಜ್ಞಾನಿಕ ಮನೋಭಾವ ಹಾಗೂ ಮಾನವೀಯ ಮೌಲ್ಯಗಳು ಸಂವಿಧಾನದ ಮೂಲ ಆಶಯವಾಗಿದೆ. ಹೀಗಾಗಿ ದೇಶದ ಪ್ರತಿಯೊಬ್ಬರು ತಮ್ಮ ಸುತ್ತಮುತ್ತ ನಡೆಯುವ ಪ್ರತಿಯೊಂದು ಘಟನೆ, ವಸ್ತು ವಿಷಯವನ್ನು ಪ್ರಶ್ನಿಸುವುದು, ವಿಮರ್ಶಿಸುವುದನ್ನು ರೂಢಿಸಿಕೊಳ್ಳಬೇಕು. ಆ ಮೂಲಕ ಪ್ರಜಾಪ್ರಭುತ್ವ ಯಶಸ್ಸಿಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಅವರು ಹೇಳಿದರು.

ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, ಭಾರತದ ಪ್ರಜಾಪ್ರಭುತ್ವಕ್ಕೂ ವೈಜ್ಞಾನಿಕ ಚಿಂತನೆಗೂ ಅವಿನಾಭಾವ ಸಂಬಂಧವಿದೆ. ವೈಜ್ಞಾನಿಕ ಮನೋಭಾವದಿಂದ ಮಾತ್ರ ದೇಶ ಪ್ರಗತಿಯತ್ತ ಸಾಗಲು ಸಾಧ್ಯ. ವಿವಿಧ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರ ಮೂಡಲು ಪ್ರತಿಯೊಬ್ಬರು ವೈಜ್ಞಾನಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವುದು ತೀರ ಅಗತ್ಯವಿದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಕೋಮುವಾದಿಗಳು ಅವೈಜ್ಞಾನಿಕ ನೀತಿಗಳನ್ನು ಕಾರ್ಯರೂಪಕ್ಕಿಳಿಸಲು ಸದಾ ಪ್ರಯತ್ನಿಸುತ್ತಿರುತ್ತವೆ ಎಂದು ಅವರು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಸರಕಾರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ವೌಢ್ಯಾಚರಣೆಯ ವಿರುದ್ಧ ಕಿರುನಾಟಕ ಪ್ರದರ್ಶಿಸಿದರು. ಈ ವೇಳೆ ಮಾಜಿ ಸಚಿವೆ ಲಲಿತಾ ನಾಯಕ್, ಹಿರಿಯ ನ್ಯಾಯವಾದಿ ರವಿವರ್ಮ ಕುಮಾರ್, ನಿವೃತ್ತ ನ್ಯಾ.ನಾಗಮೋಹನ ದಾಸ್, ಅಖಿಲ ಕರ್ನಾಟಕ ವಿಚಾರವಾದಿ ಸಂಘದ ಅಧ್ಯಕ್ಷ ಎ.ಎಸ್.ನಟರಾಜ್ ಮತ್ತಿತರರಿದ್ದರು.

ಸಮಾಜದಲ್ಲಿ ನಡೆಯುತ್ತಿರುವ ಅನೀತಿಗಳನ್ನು ಜೀವಂತವಾಗಿಡುವುದು ಮೂಲಭೂತವಾದಿಗಳ ಹುಟ್ಟುಗುಣವಾದರೆ, ಆ ಅನೀತಿಗಳನ್ನು ಪ್ರಶ್ನಿಸುವುದು, ವಿಮರ್ಶಿಸುವುದು ವೈಜ್ಞಾನಿಕ ಚಿಂತಕರ ಮನೋಭಾವವಾಗಿದೆ. ಹೀಗಾಗಿ ಸಮಾಜದಲ್ಲಿ ಮೂಲಭೂತವಾದಿಗಳು ಹಾಗೂ ವೈಜ್ಞಾನಿಕ ಮನೋಭಾವವುಳ್ಳವರ ನಡುವೆ ಸದಾ ಸಂಘರ್ಷ ನಡೆಯುತ್ತಿರುತ್ತದೆ.

-ಚಂದ್ರಶೇಖರ ಪಾಟೀಲ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News