ರಾಜೀವ್ ಗಾಂಧಿ ಹುಟ್ಟುಹಬ್ಬದ ಅಂಗವಾಗಿ ಸದ್ಭಾವನಾ ದಿನ ಆಚರಣೆ

Update: 2018-08-20 14:35 GMT

ಬೆಂಗಳೂರು, ಆ. 20: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹುಟ್ಟುಹಬ್ಬದ ಅಂಗವಾಗಿ ಇಂದು ದೇಶಾದ್ಯಂತ ಸದ್ಭಾವನಾ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ತಿಳಿಸಿದ್ದಾರೆ.

ಸೋಮವಾರ ಸದ್ಭಾವನಾ ದಿನದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಪ್ರತಿಜ್ಞಾವಿಧಿ ಬೋಧನೆ ಮಾಡಿದ ಬಳಿಕ ಮಾತನಾಡಿದ ಅವರು, ಎಲ್ಲ ಧರ್ಮ, ಭಾಷೆ ಹಾಗೂ ರಾಜ್ಯಗಳ ಜನರಲ್ಲಿ ಸೌಹಾರ್ದತೆಯನ್ನು ಉತ್ತೇಜಿಸಿ ಎಲ್ಲರಲ್ಲೂ ಸದ್ಭಾವನೆ ಮೂಡಿಸಿ ಹಿಂಸಾಚಾರವನ್ನು ತ್ಯಜಿಸುವಂತೆ ಮಾಡಲು ಕೇಂದ್ರ ಸರಕಾರದ ಆದೇಶದಂತೆ ಆ.20ರಂದು ಸದ್ಭಾವನಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

‘ಜಾತಿ, ಧರ್ಮ, ಪ್ರದೇಶ, ಮತ ಅಥವಾ ಭಾಷೆಯ ಭೇದಭಾವವಿಲ್ಲದೆ ಭಾರತದ ಎಲ್ಲ ಜನತೆಯ ಭಾವೈಕ್ಯತೆ ಮತ್ತು ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆಂದು ನಾನು ಪ್ರತಿಜ್ಞೆ ಮಾಡುತ್ತೇನೆ. ಅಲ್ಲದೆ, ವೈಯಕ್ತಿಕವಾಗಿಯಾಗಲೀ ಅಥವಾ ಸಾಮೂಹಿಕವಾಗಿಯಾಗಲೀ ನಮ್ಮಲ್ಲಿರುವ ಎಲ್ಲ ಭೇದಭಾವಗಳನ್ನು ಹಿಂಸಾಚಾರಕ್ಕೆ ಅವಕಾಶ ನೀಡದೆ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇನೆಂದು ಪ್ರತಿಜ್ಞೆ ಮಾಡುತ್ತೇನೆ’ ಎಂದು ಸದ್ಭಾವನಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಇದೇ ಸಂದರ್ಭದಲ್ಲಿ ಅವರು ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕಾರ್ಯದಕ್ಷತೆ, ಕೊಡುಗೆ ಹಾಗೂ ದೇಶಕ್ಕಾಗಿ ಅವರ ಅವಧಿಯಲ್ಲಿ ನಡೆದ ಉತ್ತಮ ಸಾಧನೆಗಳನ್ನು ಸ್ಮರಿಸಿದರು. ಈ ವೇಳೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News