'ಕುಟುಂಬದ ಒಬ್ಬರಿಗೆ ಮಾತ್ರ ಸಾಲಮನ್ನಾ' ನಿಯಮಕ್ಕೆ ತಿದ್ದುಪಡಿ: ಸಚಿವ ಬಂಡೆಪ್ಪ ಕಾಶಂಪೂರ್

Update: 2018-08-20 14:38 GMT

ಬೆಂಗಳೂರು, ಆ. 20: ‘ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಕೃಷಿ ಸಾಲಮನ್ನಾ’ ಎಂಬ ನಿಯಮಕ್ಕೆ ತಿದ್ದುಪಡಿ ಮಾಡಿ ಕುಟುಂಬದ ಎಷ್ಟೇ ಮಂದಿ ಸಾಲ ಪಡೆದಿದ್ದರೂ ಅವರಿಗೆ ಸಾಲಮನ್ನಾ ಅನುಕೂಲ ಆಗುವಂತೆ ಕ್ರಮ ವಹಿಸಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಜಿ ಸಿಎಂ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಪ್ರಯುಕ್ತ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಸಾಲಮನ್ನಾ ಆದೇಶದ ವೇಳೆ ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಸಾಲಮನ್ನಾ ಎಂಬ ಆದೇಶ ನಿಯಮವನ್ನು ಸೇರಿಸಲಾಗಿದೆ. ಅದನ್ನು ಮಾರ್ಪಡಿಸಿ ಪರಿಷ್ಕೃತ ಆದೇಶ ಹೊರಡಿಸಲು ಕಾಲಾವಕಾಶವಿದೆ.

ನಮ್ಮ ಸರಕಾರ ರೈತರ ಋಣಮುಕ್ತ ಗುರಿ ಹೊಂದಿದ್ದು, ಕುಟುಂಬದ ಎಷ್ಟೇ ಮಂದಿ ಕೃಷಿ ಉದ್ದೇಶಕ್ಕಾಗಿ ಸಾಲ ಪಡೆದಿದ್ದರೂ ಮನ್ನಾ ಮಾಡಲು ನಿರ್ಧರಿಸಿದೆ ಎಂದ ಅವರು, ಮೊದಲು ಹೊರಡಿಸಿದ್ದ ಆದೇಶದಲ್ಲಿದ್ದ ಕುಟುಂಬದ ಒಬ್ಬರಿಗೆ ಎಂಬ ಪದವನ್ನು ತೆಗೆಯಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

ಸಂತ್ರಸ್ತರಿಗೆ ಸಚಿವ ರೇವಣ್ಣ ಪರಿಹಾರ ಸಾಮಗ್ರಿಗಳನ್ನು ಎಸೆದಿಲ್ಲ. ಅವರು ಅಂತಃಕರಣ ಉಳ್ಳವರು. ಮಾನವೀಯತೆ ಕೆಲಸ ಮಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಖುದ್ದು ವೈಮಾನಿಕ ಸಮೀಕ್ಷೆ ನಡೆಸಿದ್ದು, ಕೆಲ ಮಾಧ್ಯಮಗಳಲ್ಲಿ ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಆದರ್ಶ ವ್ಯಕ್ತಿ: ಮಾಜಿ ಸಿಎಂ ದೇವರಾಜ ಅರಸು ಅವರು ದೇಶಕ್ಕೆ ಮಾದರಿ. ಯುವಕರನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸಿದರು. ಹಿಂದುಳಿದ ಮತ್ತು ದಲಿತ ವರ್ಗ ಸಬಲೀಕರಣಕ್ಕೆ ಆದ್ಯತೆ ನೀಡಿದ್ದರು. ಅರಸು ಸಾಮಾಜಿಕ ನ್ಯಾಯದ ಹರಿಕಾರ ಎಂದು ಸ್ಮರಿಸಿದರು.

ಕಾರು ಪ್ರದರ್ಶನ: ಅರಸು ಅವರು ಬಳಸುತ್ತಿದ್ದ ಕಾರನ್ನು ಮತ್ತೆ ಸರಕಾರ ಖರೀದಿಸುವ ಸಂಬಂಧ ಸಿಎಂ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಂಡೆಪ್ಪ ಕಾಶಂಪೂರ್ ಇದೇ ವೇಳೆ ತಿಳಿಸಿದರು. ಅರಸು 1973ರಲ್ಲಿ ಬಳಸುತ್ತಿದ್ದ ಬೆಂಜ್ ಕಾರನ್ನು ಉದ್ಯಮಿ ಮಹದೇವನ್ ಬಾಬು ಖರೀದಿಸಿದ್ದು, ಅದನ್ನು ಅವರ ಹುಟ್ಟುಹಬ್ಬದ ಅಂಗವಾಗಿ ಪ್ರದರ್ಶನಕ್ಕೆ ಇರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News