ಅವಕಾಶ ವಂಚಿತರು ಬಿಜೆಪಿಯವರನ್ನು ಕಣ್ಣೆತ್ತಿಯೂ ನೋಡಬಾರದು: ಸಿದ್ದರಾಮಯ್ಯ

Update: 2018-08-20 14:41 GMT

ಬೆಂಗಳೂರು, ಆ.20: ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆಯಿಲ್ಲದ ಬಿಜೆಪಿಯವರನ್ನು ಅವಕಾಶ ವಂಚಿತರು ಕಣ್ಣು ಎತ್ತಿಯೂ ನೋಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.

ಸೋಮವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅವಕಾಶ ವಂಚಿತರಿಗೆ ಅಧಿಕಾರ, ಸಂಪತ್ತಿನಲ್ಲಿ ಪಾಲು ಸಿಕ್ಕಿದಾಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಸಾಮಾಜಿಕ ನ್ಯಾಯ ಕಲ್ಪಿಸುವುದು ಎಂದರೆ ಒಬ್ಬರ ಪಾಲನ್ನು ಕಸಿದು ಮತ್ತೊಬ್ಬರಿಗೆ ನೀಡುವುದಲ್ಲ. ನ್ಯಾಯ ಸಮ್ಮತವಾಗಿ ಸಿಗಬೇಕಾದ ಅವಕಾಶಗಳನ್ನು ಕಲ್ಪಿಸುವುದೇ ಸಾಮಾಜಿಕ ನ್ಯಾಯ ಎಂದು ಸಿದ್ದರಾಮಯ್ಯ ಹೇಳಿದರು.

ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ತಮ್ಮ ಆಡಳಿತಾವಧಿಯಲ್ಲಿ ಸಾಮಾಜಿಕ ನ್ಯಾಯ, ಅವಕಾಶ ವಂಚಿತರು, ಮಹಿಳೆಯರು, ಹಿಂದುಳಿದ ವರ್ಗದವರು, ತಳ ಸಮುದಾಯದ ಕಲ್ಯಾಣಕ್ಕೆ ಶ್ರಮಿಸಿದ ಮಹಾನ್ ನಾಯಕರು ಎಂದು ಅವರು ಬಣ್ಣಿಸಿದರು.

ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯದಲ್ಲಿ ಮೀಸಲಾತಿ ಕಲ್ಪಿಸಿದ್ದು ದೇವರಾಜ ಅರಸು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು, ಹಿಂದುಳಿದ ವರ್ಗದವರಿಗೆ ಮೀಸಲಾತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಕಲ್ಪಿಸಲು ಸಂವಿಧಾನಕ್ಕೆ ತಿದ್ದುಪಡಿ ತಂದದ್ದು ರಾಜೀವ್‌ಗಾಂಧಿ ಎಂದು ಸಿದ್ದರಾಮಯ್ಯ ಹೇಳಿದರು.

ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐಐಎಂ, ಐಐಟಿಯಲ್ಲಿಯೂ ಮೀಸಲಾತಿ ಸೌಲಭ್ಯ ಸಿಗಲು ಕಾಂಗ್ರೆಸ್ ಕಾರಣ. ಶಾಶ್ವತ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿದ್ದೇವೆ ಎಂದು ಬಿಜೆಪಿಯವರು ಹೋದ ಕಡೆಯಲ್ಲ ಭಾಷಣಗಳನ್ನು ಮಾಡುತ್ತಿದ್ದಾರೆ. ನಾವು ಎಂದಿಗೂ ಈ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವುದನ್ನು ವಿರೋಧಿಸಿಲ್ಲ. ರಾಜ್ಯದಲ್ಲಿರುವ ಆಯೋಗಗಳ ಅಧಿಕಾರವನ್ನು ಮೊಟಕುಗೊಳಿಸಬಾರದು ಎಂಬುದಷ್ಟೇ ನಮ್ಮ ಕಾಳಜಿ ಎಂದು ಅವರು ಹೇಳಿದರು.

ಬಿಜೆಪಿಯವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆಯಿಲ್ಲ. ಹಿಂದುಳಿದ ವರ್ಗದವರು, ಮಹಿಳೆಯರಿಗೆ ರಾಜಕೀಯ ಮೀಸಲಾತಿ ಕಲ್ಪಿಸಿದ್ದು ಸಂವಿಧಾನ ವಿರೋಧಿ ಕ್ರಮ ಎಂದು ಬಿಜೆಪಿಯ ರಾಮಾಜೋಯಿಸ್ ನ್ಯಾಯಾಲಯದಲ್ಲಿ ಹೋರಾಟ ಮಾಡಿದರು. ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿಯಿದ್ದಿದ್ದರೆ ಬಿಜೆಪಿ ಮುಖಂಡರಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಅನಂತ್‌ಕುಮಾರ್ ಸೇರಿದಂತೆ ಇನ್ನಿತರರು ಪ್ರಕರಣ ಹಿಂಪಡೆಯಲು ರಾಮಾಜೋಯಿಸ್ ಮೇಲೆ ಯಾಕೆ ಒತ್ತಡ ಹೇರಿಲ್ಲ ಎಂದು ಅವರು ಪ್ರಶ್ನಿಸಿದರು.

ಈ ಎಲ್ಲ ಸಂಗತಿಗಳನ್ನು ನಮ್ಮ ಕಾರ್ಯಕರ್ತರು ಆಕ್ರಮಣಕಾರಿ ಶೈಲಿಯಲ್ಲಿ ಹೇಳಬೇಕು. ಮಂಡಲ್ ಆಯೋಗದ ಶಿಫಾರಸ್ಸುಗಳನ್ನು ವಿರೋಧಿಸಿ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ರಥಯಾತ್ರೆ ಮಾಡಿದರು. ಮಹಿಳೆಯರು, ಹಿಂದುಳಿದ ವರ್ಗದವರ ಪರವಾಗಿ ಮಾತನಾಡುವ ಯಾವ ನೈತಿಕತೆ ಬಿಜೆಪಿ ನಾಯಕರಿಗಿದೆ ಎಂದ ಅವರು, ಅವಕಾಶವಂಚಿತರು ಬಿಜೆಪಿಯವರನ್ನು ಕಣ್ಣು ಎತ್ತಿಯೂ ನೋಡಬಾರದು ಎಂದರು.

ಬಡವರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರಕಾರಗಳು 20 ಅಂಶಗಳ ಕಾರ್ಯಕ್ರಮ, ಅಮಾನವೀಯ ಪದ್ಧತಿಗಳಾದ ಜೀತ ಪದ್ಧತಿ, ಮಲಹೊರುವ ಪದ್ಧತಿಗಳನ್ನು ರದ್ದು ಮಾಡಿದವು. ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದ ದೇವರಾಜ ಅರಸು, ಉಳುವವನೇ ಭೂ ಒಡೆಯ ಎಂದರು. ಈ ಯೋಜನೆಗಳ ಲಾಭ ಪಡೆದವರೇ ಇಂದು ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಸಾಮಾಜಿಕ ಬದಲಾವಣೆ, ತಳವರ್ಗದವರ ಅಭಿವೃದ್ಧಿಯಾಗಬೇಕು ಎಂಬ ಬದ್ಧತೆ ಬಿಜೆಪಿಯವರಿಗಿಲ್ಲ. ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಇಂದಿರಾಕ್ಯಾಂಟೀನ್ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ತಳವರ್ಗಗಳ ಕಲ್ಯಾಣಕ್ಕೆ ನಾವು ಜಾರಿಗೆ ತಂದದ್ದು ಎಂದು ಸಿದ್ದರಾಮಯ್ಯ ತಿಳಿಸಿದರು.

ಜನರಿಗೆ ತಪ್ಪು ಮಾಹಿತಿ ನೀಡುವುದು, ಅನಗತ್ಯ ಗೊಂದಲ ಮೂಡಿಸುವ ಕೆಲಸದಲ್ಲಿ ಬಿಜೆಪಿಯವರು ನಿರತರಾಗಿದ್ದಾರೆ. ನಮ್ಮ ಕಾರ್ಯಕರ್ತರು ಜನರಿಗೆ ಸತ್ಯಾಂಶ ತಿಳಿಸುವ ಸಂಕಲ್ಪ ಮಾಡಬೇಕು. ನಾವು ಇತರ ಪಕ್ಷಗಳಿಂದ ಭಿನ್ನವಾಗಿರಬೇಕು ಎಂದು ಅವರು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News