ಸನಾತನ ಧರ್ಮದ ಹೆಸರಲ್ಲಿ ಉಗ್ರವಾದಕ್ಕೆ ಪ್ರೋತ್ಸಾಹ: ದಿನೇಶ್‌ ಗುಂಡೂರಾವ್

Update: 2018-08-20 14:44 GMT

ಬೆಂಗಳೂರು, ಆ.20: ಸನಾತನ ಧರ್ಮದ ಹೆಸರಿನಲ್ಲಿ ಬಿಜೆಪಿ, ಆರೆಸೆಸ್ಸ್ ಬಲಪಂಥೀಯವಾದ, ಹಿಂದುತ್ವವಾದ, ಉಗ್ರವಾದಕ್ಕೆ ಪ್ರೋತ್ಸಾಹ ನೀಡುತ್ತಿವೆ. ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಅರಾಜಕತೆ ಸೃಷ್ಟಿಸುವವರನ್ನು ಭಯೋತ್ಪಾದಕರನ್ನದೆ ಇನ್ನೇನೆಂದು ಕರೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಗತಿಪರವಾಗಿ ಆಲೋಚನೆ ಮಾಡುವವರು, ಹೋರಾಟ ಮಾಡುವವರನ್ನೆ ಗುರಿಯನ್ನಾಗಿ ಹಲ್ಲೆಗಳನ್ನು ನಡೆಸಲಾಗುತ್ತಿದೆ. ಪತ್ರಕರ್ತೆ ಗೌರಿ ಲಂಕೇಶ್, ಸಾಹಿತಿ ಡಾ.ಎಂ.ಎಂ.ಕಲಬುರ್ಗಿ, ದಾಭೋಲ್ಕರ್, ಪನ್ಸಾರೆ ಹತ್ಯೆಗಳು ಇದಕ್ಕೆ ಸಾಕ್ಷಿ. ಬಿಜೆಪಿ, ಆರೆಸ್ಸೆಸ್‌ನವರಿಗೆ ಪ್ರಗತಿಪರ ಚಿಂತನೆ ಇಲ್ಲ ಎಂದು ಅವರು ಹೇಳಿದರು.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ನಮ್ಮ ರಾಜ್ಯದ ಪೊಲೀಸರು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಇದರಿಂದಾಗಿ, ಎಂ.ಎಂ.ಕಲಬುರ್ಗಿ, ದಾಭೋಲ್ಕರ್, ಪನ್ಸಾರೆ ಹತ್ಯೆ ಪ್ರಕರಣದ ಹಿಂದೆ ಯಾರ ಕೈವಾಡವಿದೆ ಎಂಬುದು ಬಯಲಾಗುತ್ತಿದೆ. ಇವರನ್ನು ಭಯೋತ್ಪಾದಕರು ಎಂದು ಕರೆಯದೇ ಬೇರೆ ದಾರಿಯಿಲ್ಲ ಎಂದು ದಿನೇಶ್‌ ಗುಂಡೂರಾವ್ ತಿಳಿಸಿದರು.

ಸನಾತನ ಧರ್ಮದವರು ಈ ಹತ್ಯೆಗಳನ್ನು ಮಾಡಿರುವುದು ಪೊಲೀಸ್ ತನಿಖೆಯಿಂದ ಬಹಿರಂಗವಾಗುತ್ತಿರುವುದರಿಂದ ಬಿಜೆಪಿಯವರು ಈ ಬಗ್ಗೆ ಬಾಯಿ ಬಿಡುತ್ತಿಲ್ಲ. ಒಂದು ವೇಳೆ ಅನ್ಯಧರ್ಮೀಯರು ಯಾರಾದರೂ ಈ ಹತ್ಯೆಗಳನ್ನು ಮಾಡಿದ್ದರೆ ಇಷ್ಟೊತ್ತಿಗಾಗಲೇ ಅಲ್ಲೋಲಕಲ್ಲೋಲ ಆಗುತ್ತಿತ್ತು ಎಂದು ಅವರು ಹೇಳಿದರು.

ಪ್ರಗತಿಪರ ಚಿಂತನೆ ಹೊಂದಿರುವ ಹೋರಾಟಗಾರರಾದ ನಿಡುಮಾಮಿಡಿ ಸ್ವಾಮೀಜಿ, ಸಾಹಿತಿಗಳಾದ ಗಿರೀಶ್ ಕಾರ್ನಾಡ್, ಪ್ರೊ.ಎಸ್.ಕೆ.ಭಗವಾನ್ ಅವರ ಹೆಸರುಗಳನ್ನು ಬಂಧಿತ ಆರೋಪಿಗಳು ತಮ್ಮ ಪಟ್ಟಿಯಲ್ಲಿ ಇಟ್ಟುಕೊಂಡಿದ್ದರು ಎಂಬುದು ತಿಳಿದು ಬಂದಿದೆ ಎಂದು ದಿನೇಶ್‌ ಗುಂಡೂರಾವ್ ತಿಳಿಸಿದರು.

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ತಮ್ಮ ಆಡಳಿತಾವಧಿಯಲ್ಲಿ ಆಧುನಿಕ ರಾಷ್ಟ್ರ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದರು. ಪಂಜಾಬ್ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರು ಅಧಿಕಾರಕ್ಕೆ ಬಂದರು. ದೇಶದ ಜನರ ನಿರೀಕ್ಷೆಗೂ ಮೀರಿ ಆಡಳಿತದಲ್ಲಿ ಸುಧಾರಣೆ ತಂದರು ಎಂದು ಅವರು ಹೇಳಿದರು.

ದೇಶವನ್ನು 21ನೇ ಶತಮಾನಕ್ಕೆ ಸಿದ್ಧಗೊಳಿಸುವ ಸಂಕಲ್ಪ ತೊಟ್ಟಿದ್ದ ರಾಜೀವ್‌ ಗಾಂಧಿ, ಓರ್ವ ದಾರ್ಶನಿಕ, ದೂರದೃಷ್ಟಿಯ ನಾಯಕ. ಕಂಪ್ಯೂಟರ್‌ಗಳನ್ನು ದೇಶಕ್ಕೆ ಪರಿಚಯಿಸುವಾಗ ಬಿಜೆಪಿ ಸೇರಿದಂತೆ ಹಲವರು ವಿರೋಧ ಮಾಡಿದರು. ಆದರೆ, ಇಂದು ಮಾಹಿತಿ ತಂತ್ರಜ್ಞಾನ, ದೂರ ಸಂಪರ್ಕ ಕ್ಷೇತ್ರಗಳಲ್ಲಿ ಭಾರತವು ಮುಂಚೂಣಿ ರಾಷ್ಟ್ರವಾಗಿದೆ ಎಂದು ಅವರು ಹೇಳಿದರು.

18 ವರ್ಷ ತುಂಬಿದ ಯುವಕರಿಗೆ ಮತದಾನದ ಅವಕಾಶ ಕಲ್ಪಿಸುವ ಮೂಲಕ ಅವರನ್ನು ವ್ಯವಸ್ಥೆಯ ಭಾಗವನ್ನಾಗಿಸಿದರು. ಮಹಿಳೆಯರಿಗೆ ರಾಜಕೀಯದಲ್ಲಿ ಮೀಸಲಾತಿ ಕಲ್ಪಿಸಿದರು. ಸಾಮಾಜಿಕ ಬದಲಾವಣೆಗೆ ಕಾರಣವಾದ ಈ ಪಂಚಾಯತ್‌ ರಾಜ್ ಮಸೂದೆಗೆ ಬಿಜೆಪಿ ರಾಜ್ಯಸಭೆಯಲ್ಲಿ ವಿರೋಧ ಮಾಡಿತ್ತು ಎಂದು ಅವರು ತಿಳಿಸಿದರು.

ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿರುವ ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಕೇಂದ್ರ ಸರಕಾರಕ್ಕೆ ಹೇಳಿದ್ದಾರೆ. ಆದರೆ, ಈ ಸಂಬಂಧ ಅವರು ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದಿನೇಶ್‌ ಗುಂಡೂರಾವ್ ಟೀಕಿಸಿದರು.

ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿ ಸಲೀಮ್ ಅಹ್ಮದ್, ಮಾಜಿ ಸಚಿವರಾದ ಮೋಟಮ್ಮ, ರಾಣಿಸತೀಶ್, ಎಚ್.ಎಂ.ರೇವಣ್ಣ, ಮಾಜಿ ಸಭಾಪತಿಗಳಾದ ವಿ.ಆರ್.ಸುದರ್ಶನ್, ವೀರಣ್ಣ ಮತ್ತಿಕಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News