ಕೊಡಗು ಸಂತ್ರಸ್ತರ ಹಣ ದುರುಪಯೋಗ ಆರೋಪ: ದಿಟ್ಟ ಕ್ರಮ ಕೈಗೊಳ್ಳಲು ಕೊಡವ ಸಮಾಜ ಆಗ್ರಹ

Update: 2018-08-20 14:51 GMT

ಬೆಂಗಳೂರು, ಆ.20: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಅಪಾರ ಮೌಲ್ಯದ ಆಸ್ತಿ ನಷ್ಟವಾಗಿ, ಜನಜೀವನ ಅಸ್ತವ್ಯಸ್ತ ಗೊಂಡಿದೆ.ಆದರೆ, ಕೆಲವರು ಸಂತ್ರಸ್ತರ ಹೆಸರಿನಲ್ಲಿ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದು, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೊಡವ ಸಮಾಜ ಆಗ್ರಹಿಸಿದೆ.

ಸೋಮವಾರ ಇಲ್ಲಿನ ವಸಂತನಗರದಲ್ಲಿರುವ ಬೆಂಗಳೂರು ಕೊಡವ ಸಮಾಜ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಎಂ.ಎ.ರವಿ ಉತ್ತಪ್ಪ, ಪದ್ಮನಾಭ ನಗರದ ಎಸ್‌ಬಿಐ ಬ್ಯಾಂಕ್ ಶಾಖೆಯಲ್ಲಿ ಸಂತ್ರಸ್ತರ ಹೆಸರಲ್ಲಿ ಸಂದಾಯವಾದ ಹಣ ದುರುಪಯೋಗ ಪಡಿಸಿಕೊಂಡಿರುವುದು ಪತ್ತೆಯಾಗಿದ್ದು, ಈ ಸಂಬಂಧ ಸಿಸಿಬಿಗೆ ದೂರು ನೀಡಲು ನಿರ್ಧರಿಸಲಾಗಿದೆ ಎಂದರು.

ಬೆಂಗಳೂರು ಕೊಡವ ಸಮಾಜವೂ 45 ಟ್ರಕ್‌ಗಳಷ್ಟು ಅಗತ್ಯ ವಸ್ತುಗಳನ್ನು ಕೊಡಗಿನ ಜನರಿಗೆ ಕಳುಹಿಸಲಾಗಿದ್ದು, ಇನ್ನು 15 ಟ್ರಕ್‌ಗಳ ಪರಿಹಾರ ಸಾಮಗ್ರಿಗಳು ತೆರಳಲಿವೆ. ಎಲ್ಲೆಡೆಯಿಂದ ಪರಿಹಾರ ಸಾಮಗ್ರಿಗಳು ಹೆಚ್ಚು ಬರುತ್ತಿದ್ದು ಅವುಗಳನ್ನು ಕಡಿಮೆ ಮಾಡಿ ಅಗತ್ಯ ವಸ್ತುಗಳನ್ನಷ್ಟೇ ನೀಡುವಂತೆ ದಾನಿಗಳಲ್ಲಿ ಮನವಿ ಮಾಡಿದರು.

ದಾನಿಗಳಿಂದ ಸಂಗ್ರಹವಾಗಿರುವ ಅಗತ್ಯ ವಸ್ತುಗಳು ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಲು ಕೊಡವ ಸಮಾಜ ಕೊಡಗು ಜಿಲ್ಲೆಯಾದ್ಯಂತ ಇರುವ ಅರ್ಹರಿಗೆ ತಲುಪಿಸುವ ಕೆಲಸ ಮಾಡಲಿದೆ ಎಂದು ಅವರು ಹೇಳಿದರು.

ಅಪಾರ ನಷ್ಟ: ಧಾರಾಕಾರ ಮಳೆಯಿಂದಾಗಿ ಕಾಫಿ ಸೇರಿದಂತೆ ರೈತರ ಇತರೆ ಬೆಳೆಗಳು ಸಂಪೂರ್ಣ ನಾಶವಾಗಿವೆ. ಇವುಗಳಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದ ಅವರು, ಜನರಿಗೆ ಬೇಕಾಬಿಟ್ಟಿ ನಿವೇಶನಗಳನ್ನು ಹಂಚುವ ಬದಲು ಪಕ್ಕಾ ಯೋಜನೆಯನ್ನು ಸಿದ್ಧಪಡಿಸಿ ನಿವೇಶನಗಳನ್ನು ಹಂಚುವುದರಿಂದ ಸಮಸ್ಯೆಗಳು ಭವಿಷ್ಯದಲ್ಲಿ ಎದುರಾಗದಂತೆ ನೋಡಿಕೊಳ್ಳಬಹುದು ಅವರು ತಿಳಿಸಿದರು.

ನಿಲ್ಲಿಸಿ: ಕೊಡಗಿನ ಬೆಟ್ಟ ಗುಡ್ಡಗಳ ಮೇಲೆ ಸರಕಾರ ನಿವೇಶನ ರಹಿತರಿಗೆ ಪೈಸಾರಿ ಜಾಗದಲ್ಲಿ ಮನೆ ಕಟ್ಟಲು ನಿವೇಶನ ಹಂಚುತ್ತಿದ್ದು, ಅದನ್ನು ಕೂಡಲೇ ನಿಲ್ಲಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಕೊಡವ ಸಮಾಜದ ಉಪಾಧ್ಯಕ್ಷ ಮೀರಾ ಜೆ. ಕುಮಾರ್, ಖಜಾಂಚಿ ಬಿ.ಎಂ. ಗಣಪತಿ, ಕಾರ್ಯಾದರ್ಶಿ ಸುಬ್ಬಯ್ಯ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News