ದೇಶದ ಪಾರಂಪರಿಕ ನಂಬಿಕೆ ವೈಜ್ಞಾನಿಕತೆಗೆ ಪೂರಕವಾಗಿಲ್ಲ: ಡಾ.ಎಲ್.ಹನುಮಂತಯ್ಯ

Update: 2018-08-20 14:53 GMT

ಬೆಂಗಳೂರು, ಆ.20: ದೇಶದ ಪಾರಂಪರಿಕ ನಂಬಿಕೆಗಳು ವೈಜ್ಞಾನಿಕತೆಗೆ ಪೂರಕವಾಗಿಲ್ಲ. ಹೀಗಾಗಿ ಜನತೆಯಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಸವಾಲಿನ ಕೆಲಸವೆಂದು ಸಂಸದ ಡಾ.ಎಲ್.ಹನುಮಂತಯ್ಯ ಅಭಿಪ್ರಾಯಿಸಿದರು.

ಸೋಮವಾರ ರಾಜ್ಯ ಸಮನ್ವಯ ಸಮಿತಿ ಹಾಗೂ ನ್ಯಾಷನಲ್ ಕಾಲೇಜು ವತಿಯಿಂದ ನಗರದ ಎನ್.ಎಚ್.ಸಭಾಂಗಣದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ವಿಜ್ಞಾನಿಗಳು ವ್ಯೋಮನೌಕೆಯನ್ನು ಆಕಾಶಕ್ಕೆ ಹಾರಿಸುವ ಮುನ್ನ, ಜ್ಯೋತಿಷಿಗಳ ಬಳಿ ಕಾಲವನ್ನು ಕೇಳುವ ಪರಂಪರೆ ಹೊಂದಿದ್ದಾರೆ. ಅಂದರೆ, ನಮ್ಮ ದೇಶದ ಪಾರಂಪರಿಕ ನಂಬಿಕೆಗಳು ವಿಜ್ಞಾನ ಹಾಗೂ ವೈಜ್ಞಾನಿಕತೆಗೆ ಎಷ್ಟು ಸವಾಲಾಗಿದೆ ಎಂಬುದು ಅರ್ಥವಾಗುತ್ತದೆ ಎಂದು ಅವರು ತಿಳಿಸಿದರು.

ದೇಶದ ಪ್ರತಿಯೊಬ್ಬ ಪ್ರಜೆಯು ವೈಜ್ಞಾನಿಕ ಮನಸ್ಥಿತಿ, ಮಾನವೀಯತೆ ಬೆಳೆಸಿಕೊಳ್ಳಬೇಕೆಂಬುದೆ ನಮ್ಮ ಸಂವಿಧಾನದ ಆಶಯವಾಗಿದೆ. ಆದರೆ, ಮೂಲಭೂತ ವಾದಿ ಸಂಘಟನೆಗಳು ಇಂತಹ ಆಶಯಗಳಿಗೆ ವಿರುದ್ಧವಾಗಿ ದೇಶದಲ್ಲಿ ಶ್ರೇಣೀಕರಣ ವ್ಯವಸ್ಥೆಗೆ ಪೂರಕವಾದ, ಜಾತೀಯತೆಯನ್ನು ಪೋಷಿಸುವಂತಹ ಮನುಸ್ಮತಿ ಜಾರಿಯಾಗಬೇಕೆಂದು ಬಯಸುತ್ತಿದ್ದಾರೆ ಎಂದು ಅವರು ವಿಷಾದಿಸಿದರು.

ದೇಶದಲ್ಲಿ ಮೂಲಭೂತವಾದಿ ಗುಣಗಳನ್ನು ಟೀಕಿಸುವ, ವಿಶ್ಲೇಷಿಸುವ ಪರಂಪರೆ ಚಾರ್ವಾಕರ ಕಾಲದಿಂದಲೂ ನಿರಂತರವಾಗಿ ಸಾಗಿ ಬಂದಿದೆ. ಆ ಕಾರಣಕ್ಕಾಗಿ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಭದ್ರವಾಗಿ ಉಳಿದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಟೀಕಿಸುವವರನ್ನು, ವಿಮರ್ಶಿಸುವವರನ್ನು ಹಲ್ಲೆ ಹಾಗೂ ಕೊಲ್ಲುವಂತಹ ಮನಸ್ಥಿತಿ ರೂಪಗೊಳ್ಳುತ್ತಿರುವುದು ಅಪಾಯಕಾರಿಯಾದದ್ದೆಂದು ಅವರು ಕಳವಳ ವ್ಯಕ್ತಪಡಿಸಿದರು.

ಅಖಿಲ ಭಾರತ ಜನ ವಿಜ್ಞಾನ ಸಂಘಟನೆಗಳ ಜಾಲದ ಅಧ್ಯಕ್ಷ ಡಾ.ಎಸ್.ಚಟರ್ಜಿ ಮಾತನಾಡಿ, ಇಂದು ದೇಶದಲ್ಲಿ ಪ್ರಶ್ನೆ ಮಾಡುವವರ ಮೇಲೆ, ವೈಜ್ಞಾನಿಕ ಚಿಂತನೆಯಡಿ ಕಾರ್ಯನಿರ್ವಹಿಸುವವರ ಮೇಲೆ ಹಲ್ಲೆ, ಕೊಲೆ ಮಾಡುವಂತಹ ಗುಂಪುಗಳು ಪ್ರಬಲವಾಗುತ್ತಿವೆ. ಇಂತಹ ಸಂದರ್ಭದಲ್ಲಿ ವೈಜ್ಞಾನಿಕ ಮನೋಭಾವ ಚಿಂತನೆ, ವ್ಯಕ್ತಿಗೆ, ಹಳ್ಳಿಗೆ, ನಗರಕ್ಕೆ ರಾಜ್ಯ ಹಾಗೂ ದೇಶಕ್ಕೆ ಯಾಕೆ ಅಗತ್ಯವಾಗಿದೆ ಎಂಬುದನ್ನು ತಿಳಿಸುವ ಅಗತ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿ ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ.ಶರ್ಬರಿ ಭಟ್ಟಾಚಾರ್ಯ, ಗಾಂಧಿ ಸೆಂಟರ್ ಆಫ್ ಸೈನ್ಸ್ ಅಂಡ್ ಹ್ಯೂಮನ್ ವ್ಯಾಲ್ಯುಸ್‌ನ ನಿರ್ದೇಶಕ ಪ್ರೊ.ಎಸ್.ಬಾಲಚಂದ್ರರಾವ್, ಅಖಿಲ ಕರ್ನಾಟಕ ವಿಚಾರವಾದಿ ಸಂಘದ ಅಧ್ಯಕ್ಷ ಎ.ಎಸ್.ನಟರಾಜ್, ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಎನ್.ಅನಂತನಾಯಕ್, ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನದ ಸಂಚಾಲಕ ಈ.ಬಸವರಾಜು ಮತ್ತಿತರರಿದ್ದರು.

ದೇಶದಲ್ಲಿ ಮಹಾಭಾರತ, ರಾಮಾಯಣ ಗ್ರಂಥವನ್ನು ಡಾ.ಬಿ.ಆರ್.ಅಂಬೇಡ್ಕರ್ ವಿಮರ್ಶೆ ಮಾಡಿದಷ್ಟು ಮತ್ಯಾರು ಮಾಡಿಲ್ಲ. ಒಂದು ವೇಳೆ ಧಾರ್ಮಿಕ ಗ್ರಂಥಗಳನ್ನು ವಿಮರ್ಶೆ ಮಾಡುವವರನ್ನು ಕೊಲ್ಲುವುದೆ ಪರಿಹಾರವಾಗಿದ್ದರೆ, ಡಾ.ಬಿ.ಆರ್.ಅಂಬೇಡ್ಕರ್‌ರವರೆ ಮೊದಲು ಕೊಲೆಯಾಗಬೇಕಿತ್ತು. ಆದರೆ, ಭಾರತೀಯ ಸಮಾಜದಲ್ಲಿ ವಿಮರ್ಶೆಗೆ ಮುಕ್ತ ಅವಕಾಶವಿದೆ. ಇತ್ತೀಚಿನ ಕೆಲವು ಮೂಲಭೂತವಾದಿ ಗುಂಪುಗಳು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿ ಬೆಳೆಯುತ್ತಿವೆ. ಇವುಗಳಿಗೆ ಕಡಿವಾಣ ಹಾಕಬೇಕಿದೆ.

-ಡಾ.ಎಲ್.ಹನುಮಂತಯ್ಯ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News