ಕೇರಳ, ಕೊಡಗಿನ ನೆರೆ ಸಂತ್ರಸ್ತರಿಗೆ ಜಯನಗರ, ಬಿಟಿಎಂ ಲೇಔಟ್ ಜನರಿಂದ ನೆರವು

Update: 2018-08-20 15:03 GMT

ಬೆಂಗಳೂರು, ಆ.20: ಮಹಾಮಳೆಯಿಂದಾಗಿ ಮನೆಗಳನ್ನು ಕಳೆದುಕೊಂಡು ಪುನರ್‌ವಸತಿ ಕೇಂದ್ರದಲ್ಲಿ ವಾಸಿಸುತ್ತಿರುವ ಕೇರಳ ಮತ್ತು ಕೊಡಗಿನ ನಿರಾಶ್ರಿತರಿಗೆ ಜಯನಗರ, ಬಿಟಿಎಂ ಲೇಔಟ್ ಜನತೆ ಹಣ ಹಾಗೂ ದಿನಬಳಕೆಯ ವಸ್ತುಗಳನ್ನು ನೀಡಿದರು.

ಸೋಮವಾರ ಬೆಳಗ್ಗೆ ಅಗತ್ಯ ಸಾಮಗ್ರಿಗಳನ್ನು ತುಂಬಿಕೊಂಡು ಹೊರಟ 15 ಲಾರಿಗಳಿಗೆ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿ, ಜಯನಗರ ವಿಧಾನಸಭಾ ಕ್ಷೇತ್ರದ ನಾಗರಿಕರು, ಸಂಘಸಂಸ್ಥೆಗಳು ಹಾಗೂ ಎಲ್ಲ ವಾರ್ಡ್‌ಗಳ ಪಾಲಿಕೆ ಸದಸ್ಯರು ಖುದ್ದಾಗಿ ಹಣ, ಆಹಾರ ಸಾಮಗ್ರಿ ಮತ್ತಿತರ ಅಗತ್ಯ ವಸ್ತುಗಳನ್ನು ಸಂತ್ರಸ್ತರಿಗೆ ಪೂರೈಸಲು ಸಹಾಯ ಹಸ್ತ ಚಾಚಿದ್ದಾರೆ ಎಂದರು.

ಜಯನಗರ, ಬಿಟಿಎಂ ಬಡಾವಣೆಯಿಂದಲೆ ಕೆಲವು ಸ್ವಯಂ ಸೇವಕರು ಖುದ್ದಾಗಿ ಮಡಿಕೇರಿ, ಸೋಮವಾರ ಪೇಟೆ, ಕುಶಾಲನಗರ ಹಾಗೂ ಕೇರಳದ ವಿವಿಧ ಜಿಲ್ಲೆಗಳ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅವರಿಗೆ ಅಗತ್ಯ ಸಾಮಗ್ರಿಗಳನ್ನು ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಮಗ್ರಿ ಅಗತ್ಯಬಿದ್ದಲ್ಲಿ ಮತ್ತೆ ಕಳುಹಿಸಿಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಪಾಲಿಕೆ ಸದಸ್ಯ ಎನ್.ನಾಗರಾಜು ಹಾಗೂ ಬಾಂಧವ ಸಂಘ ಸಂಸ್ಥೆ ನೇತೃತ್ವದಲ್ಲಿ ಕೇರಳಕ್ಕೆ 5 ಹಾಗೂ ಮಡಿಕೇರಿಗೆ 10 ಲಾರಿ ಸೇರಿ ಒಟ್ಟು 15 ಲಾರಿಗಳು ಬೆಳಗ್ಗೆ ಕೊಡಗು ಮತ್ತು ಕೇರಳದತ್ತ ಪ್ರಯಾಣ ಬೆಳೆಸಿದವು (ಅವುಗಳಲ್ಲಿ 2 ಔಷಧ ತುಂಬಿರುವುದು). ಬೆಡ್‌ಶೀಟ್, ಚಾಪೆ, ದಿಂಬು, ರಗ್ಗು, ಹಕ್ಕಿ , ಬೇಳೆ, ಬ್ರೆಡ್, ಕೇಕ್, ನೀರು ಮತ್ತಿತರ ವಸ್ತುಗಳನ್ನು ತುಂಬಿ ಕಳುಹಿಸಲಾಯಿತು.

ಈ ವೇಳೆ ಶಾಸಕಿ ಸೌಮ್ಯ ರೆಡ್ಡಿ, ಮೇಯರ್ ಸಂಪತ್ ರಾಜ್, ಮಾಜಿ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ್, ಪಾಲಿಕೆ ಸದಸ್ಯ ಗಂಗಾಂಬಿಕೆ, ಕುಪೇಂದ್ರ ರೆಡ್ಡಿ, ಸಂಪತ್ ರಾಜ್, ಸಿ.ಕೆ. ರಾಮಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News