ಪತ್ನಿಯ ಹತ್ಯೆ ಪ್ರಕರಣ: ಆರೋಪಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆ ರದ್ದುಗೊಳಿಸಿದ ಹೈಕೋರ್ಟ್

Update: 2018-08-20 16:32 GMT

ಬೆಂಗಳೂರು, ಆ.20: ಪತ್ನಿಯು ಮನೆಯಲ್ಲಿ ನಿತ್ಯ ಗಲಾಟೆ ಮಾಡುತ್ತಿದ್ದಳು ಎಂಬ ಕಾರಣಕ್ಕೆ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ ವ್ಯಕ್ತಿಯೊಬ್ಬನಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸಿರುವ ಹೈಕೋರ್ಟ್, ಆತನನ್ನು ಕೂಡಲೇ ಜೈಲಿನಿಂದ ಬಿಡುಗಡೆಗೊಳಿಸಲು ಆದೇಶಿಸಿದೆ.

ಪತ್ನಿಯ ಕೊಲೆ ಪ್ರಕರಣದಲ್ಲಿ ತನ್ನನ್ನು ಖುಲಾಸೆಗೊಳಿಸಿ, ನಗರದ 15ನೆ ಹೆಚ್ಚುವರಿ ತ್ವರಿತಗತಿ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆ ರದ್ದುಪಡಿಸಬೇಕು ಎಂದು ಕೋರಿ ನಗರದ ನಿವಾಸಿ ಕೆ.ಸುರೇಶ್ ಕುಮಾರ್, ಹೈಕೊರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಮತ್ತು ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಪತ್ನಿಯನ್ನು ಕೊಲೆ ಮಾಡಬೇಕೆಂಬ ಉದ್ದೇಶವನ್ನು ಸುರೇಶ್ ಕುಮಾರ್ ಹೊಂದಿರಲಿಲ್ಲ. ಇದು ಪೂರ್ವ ಯೋಜಿತ ಕೃತ್ಯವಲ್ಲ. ಹೀಗಾಗಿ, ಪ್ರಕರಣವನ್ನು ಉದ್ದೇಶಪೂರ್ವಕ ಕೊಲೆಯ ಬದಲಾಗಿ ಉದ್ದೇಶಪೂರ್ವಕವಲ್ಲದ ಕೊಲೆ ಎಂಬುದಾಗಿ ಪರಿಗಣಿಸಿ, ಆರೋಪಿಗೆ ಅಧೀನ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆ ರದ್ದುಪಡಿಸಲಾಗಿದೆ ಎಂದು ಆದೇಶ ಮಾಡಿದೆ.

ಸುರೇಶ್ ಕುಮಾರ್ 2009ರಲ್ಲಿ ಶೋಭಾ ಎಂಬುವವರನ್ನು ಮದುವೆಯಾಗಿದ್ದರು. ಪ್ರತಿದಿನ ಜಗಳ ಮಾಡುತ್ತಿದ್ದಳು. ಒಂದು ದಿನ ವಿನಾಕಾರಣ ಜಗಳವಾಡಿದಾಗ, ನಾನು ಹೊಡೆಯಲು ಹೋದೆ. ಅದಕ್ಕೆ ಅಯ್ಯೋ ನನ್ನ ಸಾಯಿಸಿಬಿಡುತ್ತಾರೆ ಎಂದು ಕಿರುಚಾಡಿದಳು. ಆಗ ನಾನು ನಿಜವಾಗಿ ಸಾಯಿ ಎಂದು ಕೋಪದಿಂದ ಕತ್ತು ಹಿಸುಕಿದೆ. ಘಟನೆಗೆ ನಾನೇ ಹೊಣೆ ಎಂದು ಸುರೇಶ್ ಸ್ಪಷ್ಟಪಡಿಸಿದ್ದರು.

ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅಧೀನ ನ್ಯಾಯಾಲಯ ಸುರೇಶ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಆತ ಹೈಕೊರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಸುರೇಶ್ ಪರ ವಕೀಲ ಆರ್.ಪಿ.ಚಂದ್ರಶೇಖರ್ ವಾದ ಮಂಡಿಸಿ, ಇದು ಉದ್ದೇಶ ಪೂರ್ವಕ ಕೊಲೆ ಅಲ್ಲ. ಹೀಗಾಗಿ ಆರೋಪಿಗೆ ವಿಧಿಸಿರುವ ಜೀವಾವಧಿ ಶಿಕ್ಷೆ ರದ್ದುಪಡಿಸಬೇಕು ಎಂದು ಕೋರಿದ್ದರು. ಈ ಮನವಿಯನ್ನು ಹೈಕೋರ್ಟ್ ಪರಿಗಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News