ಕವಿತೆಗೆ ಜೀವಂತ ಸ್ಪರ್ಶ ನೀಡಿದ ನಾಡಿಗ್: ಪ್ರೊ.ಚಂಪಾ

Update: 2018-08-20 16:35 GMT

ಬೆಂಗಳೂರು, ಆ.20: ಕವಿ ಡಾ.ಸುಮತೀಂದ್ರ ನಾಡಿಗ್ ಮೊದಲ ಬಾರಿಗೆ ಕವಿತೆಗೆ ಜೀವಂತ ಸ್ಪರ್ಶ ನೀಡುವ ಮೂಲಕ ಅಕ್ಷರಗಳ ಮೇಲೆ ವ್ಯಾಮೋಹ ಮೂಡಿಸಿದ್ದವರು ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ನೆನಪಿಸಿಕೊಂಡರು.

ಸೋಮವಾರ ನಗರದ ಸುರಾನಾ ಕಾಲೇಜಿನಲ್ಲಿ ಡಾ.ಸುಮತೀಂದ್ರ ನಾಡಿಗ್ ಸ್ನೇಹ ಬಳಗ ವತಿಯಿಂದ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದು ಪದಪುಂಜದಲ್ಲಿ, ಚೌಕಟ್ಟಿನಲ್ಲಿ ನಾಡಿಗ್ ಅವರನ್ನು ನೋಡಲು ಸಾಧ್ಯವಿಲ್ಲ. ಅವರ, ಸ್ನೇಹದಲ್ಲಿ ನಗೆ, ತುಂಟತನ, ಪ್ರೀತಿ, ವಾತ್ಸಲ್ಯ, ಕಾಳಜಿ ಇತ್ತು. ಅವರ ಪದ್ಯ ಓದುವಂತಿರಲಿಲ್ಲ, ಕುಣಿಸುವಂತಿತ್ತು ಎಂದು ಸ್ಮರಿಸಿದರು.

ಬೇಂದ್ರೆಯವರ ಪದ್ಯವನ್ನು ತಮ್ಮೊಳಗೆ ಅನುಕರಣೆ ಮಾಡುತ್ತಿದ್ದರು. ಕಾವ್ಯದ ಬಗ್ಗೆ ಉಮೇದು ಹೊಂದಿದ್ದರು. ಶಬ್ದದ ಬೀಜವನ್ನು ಹುಡುಕಿ ತೆಗೆಯುತ್ತಿದ್ದ ನಾಡಿಗ್, ಸ್ನೇಹಿತರೆಲ್ಲರಿಗೂ ಒಂದೊಂದು ಕವನವನ್ನು ಕೊಟ್ಟು ಅದರ ಬಗ್ಗೆ ಮಾತನಾಡಬೇಕೆಂದು ಹೇಳುತ್ತಿದ್ದರು ಎಂದು ಚಂಪಾ ಅವರೊಂದಿಗಿನ ಸ್ನೇಹವನ್ನು ಮೆಲುಕು ಹಾಕಿದರು.

ಸಂಗೀತ, ಸಾಹಿತ್ಯದಲ್ಲಿ ಸಂವೇದನಾಶೀಲರಾಗಿದ್ದ ನಾಡಿಗ್, ಇತ್ತೀಚಿಗೆ ಕನ್ನಡದ ಯುವಕರಲ್ಲಿ ಭಿನ್ನವಾದ ಕವಿತ್ವದ ಗುಣಗಳು ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದರು. ಕೊನೆಯ ದಿನಗಳಲ್ಲಿ ಅವರ ರಾಜಕೀಯ ನಿಲುವುಗಳಲ್ಲಿ ಹಲವು ಭಿನ್ನಾಭಿಪ್ರಾಯಗಳಿದ್ದವು. ನಮ್ಮಿಬ್ಬರಲ್ಲಿನ ಚಿಂತನೆಗಳು, ಭಿನ್ನವಾಗಿರಬಹುದು. ಆದರೆ, ನಮ್ಮ ನಡುವೆಯಿದ್ದ ಮನುಷ್ಯ ಸಂಬಂಧ ಹಾಳಾಗಲು ಬಿಟ್ಟಿರಲಿಲ್ಲ ಎಂದು ಚಂಪಾ ಹೇಳಿದರು.

ಮಾಜಿ ವಿಧಾನ ಪರಿಷತ್ತು ಸದಸ್ಯ ಡಿ.ಎಸ್.ವೀರಯ್ಯ ಮಾತನಾಡಿ, ಹಿರಿಯ ಸಾಹಿತಿ ದಲಿತ ಕವಿ ಸಿದ್ದಲಿಂಗಯ್ಯ ವಿಧಾನಪರಿಷತ್ತು ಸದಸ್ಯರಾಗಲು ನಾಡಿಗ್ ಪ್ರಮುಖ ಕಾರಣಕರ್ತರಾಗಿದ್ದರು. ದಲಿತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ನಾಡಿನ ಶಕ್ತಿಯಾಗಿದ್ದ ನಾಡಿಗ್, ಮಕ್ಕಳ ಜತೆ ಮಗುವಾಗಿ, ಹಿರಿಯರ ಜತೆ ಕಿರಿಯರಾಗಿ, ಎಲ್ಲರನ್ನೂ ನಗಿಸುತ್ತ, ತಾವು ನಗುತ್ತ, ಜನಮುಖಿ ಜೀವನ ನಡೆಸಿದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾಹಿತಿ ನಾಡೋಜ ಹಂ.ಪ.ನಾಗರಾಜಯ್ಯ, ಪ್ರೊ.ಕೆ.ಇ. ರಾಧಾಕೃಷ್ಣ, ಕತೆಗಾರ ದಿವಾಕರ್ ಸೇರಿದಂತೆ ನಾಡಿಗ್ ಕುಟುಂಬದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News