ರಾಘವೇಶ್ವರ ಶ್ರೀ ಆರೋಪ ಮುಕ್ತ: ಅರ್ಜಿ ವಿಚಾರಣೆ ಸೆ.4ಕ್ಕೆ ಮುಂದೂಡಿದ ಹೈಕೋರ್ಟ್

Update: 2018-08-20 18:15 GMT

ಬೆಂಗಳೂರು, ಆ.20: ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳನ್ನು ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಿರುವ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಸೆ.4ಕ್ಕೆ ಮುಂದೂಡಿದೆ. ಈ ಕುರಿತಂತೆ ಸಂತ್ರಸ್ತೆ ಮತ್ತು ಪ್ರಾಸಿಕ್ಯೂಷನ್ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಸ್ವಾಮೀಜಿ ಪರ ವಕೀಲ ಹಾಜರಿದ್ದ ಹಿರಿಯ ವಕೀಲ ರವಿ ಬಿ.ನಾಯ್ಕ ಅವರು, ಪ್ರಕರಣದ ಮುಖ್ಯ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಬೇಕು ಎಂದು ಕೋರಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಂತ್ರಸ್ತೆಯ ಪರ ಹಾಜರಿದ್ದ ಹಿರಿಯ ವಕೀಲ ಎಂ.ಟಿ.ನಾಣಯ್ಯ, ಆರೋಪಿ ಪ್ರಕರಣವನ್ನು ವೃಥಾ ವಿಳಂಬಿಸುತ್ತಿದ್ದಾರೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಹಾಗೆಲ್ಲಾ ವಿಳಂಬಿಸಲು ಬಿಡುವುದಿಲ್ಲ ಮತ್ತು ದೀರ್ಘ ಕಾಲದವರೆಗೆ ವಿಚಾರಣೆ ಮುಂದೂಡಲು ಆಗುವುದಿಲ್ಲ ಎಂದು ಹೇಳಿ, ವಿಚಾರಣೆಯನ್ನು ಸೆ.4ಕ್ಕೆ ಮುಂದೂಡಿದೆ. ಆರೋಪಿ ಸ್ವಾಮೀಜಿ ಪರ ಪಿ.ಎನ್.ಮನಮೋಹನ್ ವಕಾಲತ್ತು ವಹಿಸಿದ್ದಾರೆ.

ಪ್ರಕರಣವೇನು: ಸ್ವಾಮೀಜಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಈ ಬಗ್ಗೆ ಸೂಕ್ತ ಸಾಕ್ಷಾಧಾರಗಳಿವೆ. ಪ್ರಕರಣದಲ್ಲಿ ಪೊಲೀಸರು ಸಾಮೀಜಿ ವಿರುದ್ಧ ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆದರೂ, ಅವರು ಅತ್ಯಾಚಾರ ನಡೆಸಿದ ಬಗ್ಗೆ ಸಾಕ್ಷಾಧಾರಗಳಿಲ್ಲ ಎಂದು ಸೆಷನ್ಸ್ ನ್ಯಾಯಾಧೀಶ ಜಿ.ಬಿ.ಮುದಿಗೌಡರ್ ಅಭಿಪ್ರಾಯಪಟ್ಟಿದ್ದಾರೆ. ಇದು ತಪ್ಪು ಎಂಬುದು ಅರ್ಜಿದಾರರ ವಾದ. ಸ್ವಾಮೀಜಿ ಅವರನ್ನು ಆರೋಪದಿಂದ ಮುಕ್ತಗೊಳಿಸಿ ಮುದಿಗೌಡರ್ 2016ರ ಮಾರ್ಚ್ 31ರಂದು ಹೊರಡಿಸಿದ ಆದೇಶ ರದ್ದುಗೊಳಿಸಬೇಕು ಎಂದು ಕೋರಿ ಸಂತ್ರಸ್ತೆ ಮತ್ತು ಪ್ರಾಸಿಕ್ಯೂಷನ್ ಈ ಮೇಲ್ಮನವಿ ಸಲ್ಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News