ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಗುತ್ತಿಗೆ ನೌಕರರಿಂದ ಅನಿರ್ದಿಷ್ಟಾವಧಿ ಧರಣಿ

Update: 2018-08-20 18:21 GMT

ಬೆಂಗಳೂರು, ಆ.20: ಸರಕಾರದ ವಿವಿಧ ಇಲಾಖೆಗಳ ಗುತ್ತಿಗೆ ನೌಕರರಿಗೆ ಹಲವು ತಿಂಗಳಿನಿಂದ ವೇತನ ನೀಡಿಲ್ಲ ಎಂದು ಆರೋಪಿಸಿ ನೂರಾರು ನೌಕರರು ನಿನ್ನೆಯಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ಸೋಮವಾರ ನಗರದ ಸ್ವಾತಂತ್ರ ಉದ್ಯಾನವನದ ಮೈದಾನದಲ್ಲಿ ಕರ್ನಾಟಕ ಸರಕಾರಿ ಗುತ್ತಿಗೆ ನೌಕರರ ಮಹಾ ಒಕ್ಕೂಟದ ನೇತತ್ವದಲ್ಲಿ ಜಮಾಯಿಸಿದ ನೂರಾರು ಗುತ್ತಿಗೆ ನೌಕರರು, ತಮಗೆ ಸೂಕ್ತ ಸಮಯಕ್ಕೆ ವೇತನ ನೀಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಡಾ.ಎಚ್.ವಿ.ವಾಸು, ಇಲಾಖೆಯ ತಾಂತ್ರಿಕ ಸಮಸ್ಯೆಯಿಂದ ವರ್ಷಾನುಗಟ್ಟಲೆ ದುಡಿದ ಪಶು ಸಂಗೋಪನೆ ಇಲಾಖೆಯ ಗುತ್ತಿಗೆ ನೌಕರರನ್ನು ವಿನಾಕಾರಣ, ಕೆಲಸದಿಂದ ತೆಗೆಯಲಾಗುತ್ತಿದೆ. ಅಷ್ಟೇ ಅಲ್ಲದೆ, ಐದಾರು ತಿಂಗಳಿನಿಂದ ವೇತನ ನೀಡಿಲ್ಲ ಎಂದು ಆರೋಪಿಸಿದರು.

ಹಲವು ವರ್ಷಗಳಿಂದ ಪಶುಸಂಗೋಪನಾ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಡಿ ಗ್ರೂಪ್ ನೌಕರರು, ಡಾಟಾ ಎಂಟ್ರಿ ಆಪರೇಟರ್‌ಗಳೂ ಮತ್ತು ವಾಹನ ಚಾಲಕರನ್ನು ಇಲಾಖೆಯ ತಾಂತ್ರಿಕ ಸಮಸ್ಯೆ ಕಾರಣ ಹೇಳಿ ವಜಾ ಮಾಡಲಾಗುತ್ತಿದೆ. ಇದರಿಂದ ಸಾವಿರಾರು ನೌಕರರ ಬದುಕು ಅತಂತ್ರವಾಗಿದೆ ಎಂದು ಹೇಳಿದರು.

ಸರಕಾರದ 15 ವಿವಿಧ ಇಲಾಖೆಗಳ 30 ಸಾವಿರಕ್ಕೂ ಅಧಿಕ ಗುತ್ತಿಗೆ ನೌಕರರು ವೇತನ ಇಲ್ಲದೆ, ಸಂಕಷ್ಟದಲ್ಲಿದ್ದಾರೆ. ಇದು ಕಾನೂನಿನ ಉಲ್ಲಂಘನೆ ಮಾತ್ರವಲ್ಲದೆ, ಮಾನವ ಹಕ್ಕುಗಳ ಉಲ್ಲಂಘನೆಯೂ ಹೌದು ಎಂದ ಅವರು, ಈ ಕೂಡಲೇ ರಾಜ್ಯ ಸರಕಾರವೂ ಗುತ್ತಿಗೆ ನೌಕರರ ವೇತನ ಪಾವತಿಗೆ ಮುಂದಾಗಬೇಕು. ಯಾವುದೇ ಇಲಾಖೆ ಇರಲಿ, ಹಾಲಿ ದುಡಿಯುತ್ತಿರುವ ನೌಕರರನ್ನು, ವಜಾ ಮಾಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಗುತ್ತಿಗೆ ಡಾಟಾ ಎಂಟ್ರಿ ಆಪರೇಟರ್ ಸುಜಾತಾ ಮಾತನಾಡಿ ಮಹಿಳೆಯರಿಗೆ ಹೆರಿಗೆ ರಜೆಯೂ ನೀಡುವುದಿಲ್ಲ. ಹಸುಗೂಸಿದ್ದರೂ ಕಚೇರಿಗೆ ಹೋಗಲೇಬೇಕಾದ ಅನಿರ್ವಾಯ ಇರುತ್ತದೆ. ಇಂದು ಅಥವಾ ನಾಳೆ ಕೆಲಸವನ್ನು ಪರ್ಮನೆಂಟ್ ಮಾಡುತ್ತಾರೆ ಎಂದು ಕಾಯುತ್ತಲೇ ದಿನದೂಡುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

60 ವರ್ಷಗಳವರೆಗೆ ಸೇವಾ ಭದ್ರತೆ ಮತ್ತು ಸಮಾನ ವೇತನ ಎಚ್.ಡಿ.ಕುಮಾರಸ್ವಾಮಿಯವರ ಚುನಾವಣಾ ಭರವಸೆಯಾಗಿತ್ತು. ಈಗ ಇರುವ ಭದ್ರತೆಯೂ ಕಿತ್ತು ಹೋಗುತ್ತಿದೆ. ಕೊಡಬೇಕಾದ ವೇತನವನ್ನೂ ಕೊಡುತ್ತಿಲ್ಲ. ಇವೆಲ್ಲವೂ ಸೇರಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಮಾಡುವ ಸ್ಥಿತಿಯನ್ನು ನಿರ್ಮಾಣ ಮಾಡಿವೆ.

-ಪ್ರತಿಭಟನಕಾರರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News