ನೀವು ಊಟ ಮಾಡುವಾಗ ನಿಮ್ಮ ಫೋನ್ ಬಳಸುತ್ತೀರಾ?

Update: 2018-08-21 10:55 GMT

ಟಾಯ್ಲೆಟ್ ಸೀಟ್‌ಗಳು ಕೀಟಾಣುಗಳಿಂದ ತುಂಬಿರುವ ಅತ್ಯಂತ ಕೊಳಕು ವಸ್ತುಗಳಲ್ಲೊಂದು ಎಂದು ನೀವು ಭಾವಿಸಿದ್ದರೆ ಒಮ್ಮೆ ನಿಮ್ಮ ಸ್ಮಾರ್ಟ್‌ಫೋನ್‌ನತ್ತ ಕಣ್ಣು ಹಾಯಿಸಿ. ಸ್ಮಾರ್ಟ್‌ಫೋನ್ ಸ್ಕ್ರೀನ್‌ಗಳಲ್ಲಿ ಟಾಯ್ಲೆಟ್ ಸೀಟ್‌ಗಿಂತ ಮೂರು ಪಟ್ಟು ಹೆಚ್ಚು ಕೀಟಾಣುಗಳಿರುತ್ತವೆ ಎಂದು ಇತ್ತೀಚಿನ ಸಂಶೋಧನೆಯೊಂದು ಬಹಿರಂಗಗೊಳಿಸಿದೆ.

ಶೇ.35ರಷ್ಟು ಜನರು ವೈಪ್,ಕ್ಲೀನಿಂಗ್ ಫ್ಲುಯೆಡ್‌ನಂತಹ ಉತ್ಪನ್ನಗಳನ್ನು ಬಳಸಿ ತಮ್ಮ ಸ್ಮಾರ್ಟ್‌ಫೋನ್‌ಗಳನ್ನೆಂದೂ ಸ್ವಚ್ಛಗೊಳಿಸುವ ಗೋಜಿಗೆ ಹೋಗುವುದಿಲ್ಲ ಎಂದು ಮೊಬೈಲ್‌ನಂತಹ ಸಾಧನಗಳಿಗೆ ವಿಮಾರಕ್ಷಣೆಯನ್ನು ಒದಗಿಸುವ ಇಂಗ್ಲಂಡ್‌ನ ಇನ್ಶೂರನ್ಸ್2ಗೋ ಸಂಸ್ಥೆಯು ನಡೆಸಿರುವ ಅಧ್ಯಯನವು ತಿಳಿಸಿದೆ.

ಪ್ರತಿ 20 ಸ್ಮಾರ್ಟ್‌ಫೋನ್ ಬಳಕೆದಾರರ ಪೈಕಿ ಓರ್ವ ಮಾತ್ರ ತನ್ನ ಫೋನ್‌ನ್ನು ಪ್ರತಿ ಆರು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಒಮ್ಮೆ ಸ್ವಚ್ಛಗೊಳಿಸುತ್ತಾನೆ ಎಂದು ಅದು ಹೇಳಿದೆ.

  ಸಂಶೋಧಕರು ತಮ್ಮ ಅಧ್ಯಯನಕ್ಕಾಗಿ ಎರೋಬಿಕ್ ಬ್ಯಾಕ್ಟೀರಿಯಾ,ಯೀಸ್ಟ್ ಮತ್ತು ವೌಲ್ಡ್‌ಗಳ ಪ್ರಮಾಣವನ್ನು ಪರೀಕ್ಷಿಸಲು ಐಫೋನ್ 6,ಸ್ಯಾಮ್ಸಂಗ್ ಗೆಲಾಕ್ಸಿ 8 ಮತ್ತು ಗೂಗಲ್ ಪಿಕ್ಸೆಲ್ ಸ್ಮಾರ್ಟ್ ಫೋನ್‌ಗಳನ್ನು ಆಯ್ದಕೊಂಡಿದ್ದರು. ಪೋನ್‌ಗಳ ಎಲ್ಲ ಭಾಗಗಳು ಈ ಮೂರರ ಪೈಕಿ ಪ್ರತಿಯೊಂದನ್ನೂ ಸ್ವಲ್ಪ ಪ್ರಮಾಣದಲ್ಲಿ ಹೊಂದಿದ್ದು ಅಧ್ಯಯನದಲ್ಲಿ ಕಂಡು ಬಂದಿದೆ. ಸ್ಕ್ರೀನ್ ಕೀಟಾಣುಗಳಿಂದ ತುಂಬಿದ ಅತ್ಯಂತ ಕೊಳಕು ಭಾಗವಾಗಿದ್ದು,ಚರ್ಮದ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನವು ಹೇಳಿದೆ.

ಈ ಮೂರು ಮೊಬೈಲ್‌ಗಳ ಸ್ಕ್ರೀನ್‌ಗಳಲ್ಲಿ ಒಟ್ಟು ಪ್ರತಿ ಚದುರ ಸೆಂಮೀ.ಗೆ 254.9 ಕಾಲನಿ ಫಾರ್ಮಿಂಗ್ ಯುನಿಟ್‌ಗಳಿದ್ದವು. ಅಂದರೆ ಪ್ರತಿ ಸ್ಕ್ರೀನ್ ಸರಾಸರಿ 84.9 ಯುನಿಟ್‌ಗಳನ್ನು ಹೊಂದಿತ್ತು. ಇದಕ್ಕೆ ಹೋಲಿಸಿದರೆ ಪರೀಕ್ಷೆಗೊಳಪಡಿಸಿದ್ದ ಟಾಯ್ಲೆಟ್ ಸೀಟ್ ಮತ್ತು ಫ್ಲಷ್‌ನಲ್ಲಿ ಕೇವಲ 24 ಯುನಿಟ್‌ಗಳಿದ್ದವು. ಕಚೇರಿಗಳಲ್ಲಿ ಬಳಸುವ ಕಂಪ್ಯೂಟರ್ ಕೀಬೋರ್ಡ್ ಮತ್ತು ವೌಸ್‌ನಲ್ಲಿ ಇದಕ್ಕೂ ಕಡಿಮೆ,ಎಂದರೆ ಕೇವಲ ಐದು ಯುನಿಟ್‌ಗಳಿದ್ದವು.

ಸ್ಮಾರ್ಟ್‌ಫೋನ್‌ಗಳ ಹಿಂಭಾಗವು ಸರಾಸರಿ 30 ಯುನಿಟ್,ಲಾಕ್ ಬಟನ್ ಸರಾಸರಿ 23.8 ಯುನಿಟ್ ಮತ್ತು ಹೋಮ್ ಬಟನ್ ಸರಾಸರಿ 10.6 ಯುನಿಟ್‌ಗಳನ್ನು ಹೊಂದಿದ್ದವು ಎಂದು ಅಧ್ಯಯನ ವರದಿಯು ತಿಳಿಸಿದೆ.

ಸಮೀಕ್ಷೆಗೊಳಪಡಿಸಲಾಗಿದ್ದ ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಮೂರನೇ ಒಂದು ಭಾಗಕ್ಕೂ ಹೆಚ್ಚಿನ ಜನರು ತಾವು ಫೋನ್‌ಗಳನ್ನು ಎಂದು ಸ್ವಚ್ಛ ಮಾಡಿಯೇ ಇಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದರು.

ನಮ್ಮ ಫೋನ್‌ಗಳು ನಮ್ಮಿಂದ ಎಂದೂ ದೂರವಿರುವುದಿಲ್ಲ. ಎಲ್ಲಿಗೇ ಹೋದರೂ ನಾವು ಅವುಗಳನ್ನು ಜೊತೆಯಲ್ಲಿಯೇ ಒಯ್ಯುತ್ತೇವೆ. ಹೀಗಾಗಿ ಕೆಲವು ಕೀಟಾಣುಗಳು ಅವುಗಳಿಗೆ ಅಂಟಿಕೊಳ್ಳುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಇನ್ಶೂರನ್ಸ್2ಗೆೋದ ಮಾರಾಟಾಧಿಕಾರಿ ಗ್ಯಾರಿ ಬೀಸ್ಟನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News