ಬೆಂಗಳೂರು: ಪೊಲೀಸರ ಮೇಲೆ ಹಲ್ಲೆಗೆ ಯತ್ನ; ರೌಡಿ ಶೀಟರ್ ಅರುಣ್‌ಗೆ ಗುಂಡೇಟು

Update: 2018-08-21 13:14 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.21: ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ರೌಡಿ ಶೀಟರ್ ಅರುಣ್‌ನನ್ನು ಪೊಲೀಸರು ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸಿದ್ದಾರೆ.

ಮಂಗಳವಾರ ಗುಂಡೇಟಿನಿಂದ ಗಾಯಗೊಂಡ ಅರುಣ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 3 ಕೊಲೆ ಪ್ರಕರಣ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ 8 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಾದ ಅರುಣ್, ಕಿರಣ್, ಮಹೇಶ್ ಮತ್ತು ದಿಲೀಪ್ ಎಂಬುವರು ಕನಕಪುರ ರಸ್ತೆಯ ಜರಗನಹಳ್ಳಿ ಬಳಿಯಿರುವ ಕ್ಲಾಸಿಕ್ ಕಂಫರ್ಟ್ ಲಾಡ್ಜ್‌ನಲ್ಲಿ ಇರುವುದರ ಬಗ್ಗೆ ಪೊಲೀಸ್ ತಂಡಕ್ಕೆ ಮಾಹಿತಿ ಲಭ್ಯವಾಗಿದೆ. ತಕ್ಷಣ ಅಲ್ಲಿಗೆ ತೆರಳಿ ನಾಲ್ವರನ್ನೂ ವಶಕ್ಕೆ ಪಡೆದಿದ್ದಾರೆ. ಇವರ ಪೈಕಿ ಆರೋಪಿ ಅರುಣ್‌ನನ್ನು ವಿಚಾರಣೆಗೆ ಒಳಪಡಿಸಿದಾಗ, ಮತ್ತೊಬ್ಬ ಆರೋಪಿ ಕೆಂಚ ಎಂಬಾತ ಉಲ್ಲಾಳ ಕಡೆ ಇದ್ದು, ಆತನನ್ನು ತೋರಿಸುವುದಾಗಿ ತಿಳಿಸಿದ್ದಾನೆ.  

ಅದರಂತೆ ಪಿಎಸ್ಸೈ ಮಲ್ಲಿಕಾರ್ಜುನ್, ಸಿಬ್ಬಂದಿಗಳು ಮಂಗಳವಾರ ಬೆಳಗ್ಗೆ ಕೆಂಗೇರಿ ಕಡೆ ಹೊರಟಿದ್ದಾರೆ. ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಪೊಲೀಸ್ ಜೀಪ್‌ನಲ್ಲಿ ಆರೋಪಿ ಅರುಣ್‌ನನ್ನು ಕರೆದೊಯ್ಯುತ್ತಿದ್ದಾಗ ಆತ ವಾಹನದ ಹಿಂದಿನ ಬಾಗಿಲು ತೆಗೆದು ಇದ್ದಕ್ಕಿದ್ದಂತೆ ಓಡಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಬೆನ್ನಟ್ಟಿದ್ದು, ಶರಣಾಗುವಂತೆ ಸೂಚಿಸಿದರೂ ಆತ ನಿಲ್ಲದೆ, ಕಲ್ಲು ಎತ್ತಿ ಸಿಬ್ಬಂದಿ ಪ್ರಕಾಶ್ ಅವರ ತಲೆಗೆ ಹೊಡೆಯಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಆಗ ಮಲ್ಲಿಕಾರ್ಜುನ್ ಆತನಿಗೆ ಶರಣಾಗುವಂತೆ ತಿಳಿಸಿದ್ದು, ಅದನ್ನು ಲೆಕ್ಕಿಸದ ಆರೋಪಿ ಅರುಣ್ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದಾಗ ಮಲ್ಲಿಕಾರ್ಜುನ್ ಅವರು ಆತ್ಮರಕ್ಷಣೆಗಾಗಿ ಪಿಸ್ತೂಲ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಅದು ಆರೋಪಿಯ ಎಡಗಾಲಿಗೆ ತಗುಲಿದ ಪರಿಣಾಮ ಕುಸಿದು ಬಿದ್ದಿದ್ದಾನೆ ಎನ್ನಲಾಗಿದೆ. ನಂತರ ಸುತ್ತುವರಿದ ಪೊಲೀಸರು ಅರುಣ್‌ನನ್ನು ವಶಕ್ಕೆ ಪಡೆದು ಮೈಸೂರು ರಸ್ತೆಯಲ್ಲಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆರೋಪಿಯಿಂದ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿಯನ್ನು ಕೂಡ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚೆನ್ನಣ್ಣವರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News