ಗೃಹ ಪ್ರವೇಶದ ಹಣ ನಿರಾಶ್ರಿತರಿಗೆ ನೀಡಿದ ಉದ್ಯಮಿ

Update: 2018-08-21 13:22 GMT

ಬೆಂಗಳೂರು, ಆ.21: ನಗರದ ನಂದಿನಿ ಬಡಾವಣೆಯ ಉದ್ಯಮಿ ಆನಂದ್ ಎಂಬುವವರು ಮನೆ ಗೃಹ ಪ್ರವೇಶಕ್ಕೆ ಎಂದು ಮೀಸಲಿಟ್ಟಿದ್ದ ಒಂದು ಲಕ್ಷ ರೂ.ಗಳನ್ನು ಪ್ರವಾಹದಿಂದಾಗಿ ನಿರಾಶ್ರಿತರಾದ ಕೊಡಗು ಜನರಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು-ನಾಲ್ಕು ದಿನಗಳಿಂದ ಕೊಡಗು ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಅನಾಹುತದಿಂದಾಗಿ ಸಾವಿರಾರು ಜನರು ಅಸಹಾಯಕರಾಗಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಮನೆಯ ಗೃಹ ಪ್ರವೇಶ ಮಾಡುವುದನ್ನು ರದ್ದು ಮಾಡಿ, ಮುಖ್ಯಮಂತ್ರಿ ಪರಿಹಾರ ನಿಧಿಗೆ ಅದರ ಖರ್ಚಿನ ಹಣವನ್ನು ನೀಡಿದ್ದೇನೆ ಎಂದು ಹೇಳಿದರು.

ಆ.24 ರಂದು ವರಮಹಾಲಕ್ಷ್ಮಿ ಹಬ್ಬದ ದಿನ ಗೃಹ ಪ್ರವೇಶ ಮಾಡೋಣ ಎಂದುಕೊಂಡಿದ್ದೆ. ಆದರೆ, ಕೊಡಗಿನಲ್ಲಿ ಆಗಿರುವ ಅನಾಹುತದಿಂದ ಅದ್ದೂರಿ ಕಾರ್ಯಕ್ರಮದ ಬದಲಿಗೆ, ಸಣ್ಣದೊಂದು ಪೂಜೆ ಮಾಡಿ ಮನೆ ಪ್ರವೇಶ ಮಾಡುತ್ತೇವೆ. ಕೊಡಗು ಜಿಲ್ಲೆಯ ಜನರು ಮನೆ-ಮಠ ಕಳೆದುಕೊಂಡು ದುಃಖದಲ್ಲಿರುವಾಗ ನಾವು ಗೃಹ ಪ್ರವೇಶ ಮಾಡಿ ಸಂಭ್ರಮ ಪಡುವುದು ಸರಿಯಲ್ಲ ಅನ್ನಿಸಿತು. ಅವರೂ ನಮ್ಮವರೇ. ಅಲ್ಲಿನ ಜನರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News