ಮುಖ್ಯಮಂತ್ರಿ ಪರಿಹಾರ ನಿಧಿಗೆ 3.75 ಕೋಟಿ ರೂ.ಹಸ್ತಾಂತರ

Update: 2018-08-21 14:17 GMT

ಬೆಂಗಳೂರು, ಆ.21: ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ನೆರವು ನೀಡಲು ವಾಣಿಜ್ಯ, ಕೈಗಾರಿಕೆ ಮತ್ತು ಬೃಹತ್ ಕೈಗಾರಿಕೆ ಇಲಾಖೆ ವತಿಯಿಂದ ಮುಖ್ಯಮಂತ್ರಿಯ ಪರಿಹಾರ ನಿಧಿಗೆ 3.75 ಕೋಟಿ ರೂ.ಗಳ ಚೆಕ್ ಅನ್ನು ಸಚಿವ ಕೆ.ಜೆ.ಜಾರ್ಜ್ ಹಸ್ತಾಂತರಿಸಿದರು.

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಚೆಕ್‌ಗಳನ್ನು ಹಸ್ತಾಂತರಿಸಿದ ಅವರು, ಈ ಮೊತ್ತದಲ್ಲಿ 2 ಕೋಟಿ ರೂ.ಗಳನ್ನು ಮುಖ್ಯಮಂತ್ರಿಯ ವಿಪತ್ತು ನಿರ್ವಹಣೆ ನಿಧಿಗೆ ಹಾಗೂ 1.75 ಕೋಟಿ ರೂ.ಗಳನ್ನು ಮುಖ್ಯಮಂತ್ರಿಯ ಪರಿಹಾರ ನಿಧಿಗೆ ಬಳಸಿಕೊಳ್ಳುವಂತೆ ಕೋರಿದರು.

ಕೇರಳ ಮಾದರಿಯಲ್ಲಿ ದೇಣಿಗೆ ಸಂಗ್ರಹ ಮಾಡಲು ಚಾಲನೆ ನೀಡಿದ್ದೇವೆ. ಇದಕ್ಕಾಗಿ ಆನ್‌ಲೈನ್ ಪೋರ್ಟಲ್ ಆರಂಭಿಸಿದ್ದೇವೆ. ಈಗಾಗಲೆ ಈ ಪೋರ್ಟಲ್ ಮೂಲಕ 79 ಲಕ್ಷ ರೂ.ದೇಣಿಗೆ ಸಂಗ್ರಹವಾಗಿದೆ ಎಂದು ಈ ವೇಳೆ ಮುಖ್ಯಮಂತ್ರಿ ಹೇಳಿದರು.

ನಾಪತ್ತೆಯಾಗಿರುವವರ ಶೋಧ ಕಾರ್ಯ ಮುಂದುವರೆದಿದೆ. ಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ವ್ಯವಸ್ಥೆ ಮಾಡಲಾಗಿದೆ. ಹೊಸದಾಗಿ ಪಠ್ಯಪುಸ್ತಕ, ನೋಟ್ ಪುಸ್ತಕಗಳನ್ನು ವಿತರಣೆ ಮಾಡಲಾಗುತ್ತಿದೆ. ನೆರೆಪೀಡಿತ ಮನೆಗಳಲ್ಲಿ ಕಳ್ಳತನವಾಗುವುದನ್ನು ತಡೆಯಲು ಹೆಚ್ಚಿನ ಪೊಲೀಸ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಹೆಸರಿನಲ್ಲಿ ನಿಧಿ ಸಂಗ್ರಹಿಸಿ ಕೆಲವರು ವಂಚಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ನೆರವಿಗಾಗಿ ಆರ್ಥಿಕ ಸಹಾಯ ನೀಡಲು ಬಯಸುವವರು ನಗದು ಹಣ ನೀಡದೆ, ಚೆಕ್ ಮೂಲಕ ಅಥವಾ ನೇರವಾಗಿ ಮುಖ್ಯಮಂತ್ರಿಯ ಪರಿಹಾರ ನಿಧಿಗೆ ತಲುಪಿಸಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಸರಕಾರಿ ನೌಕರ 70 ವರ್ಷದ ವೆಂಕಟರಾಮಯ್ಯ ಎಂಬವರು ತಮ್ಮ ಪಿಂಚಣಿ ಹಣದಲ್ಲಿ 50 ಸಾವಿರ ರೂ.ಗಳನ್ನು ಮುಖ್ಯಮಂತ್ರಿಯ ಪರಿಹಾರ ನಿಧಿಗೆ ನೀಡುವ ಮೂಲಕ ಮಾನವೀಯತೆ ಮೆರೆದರು. ಇವರು ಮೂಲತಃ ಕೋಲಾರ ಜಿಲ್ಲೆಯವರಾಗಿದ್ದು, ಈಗ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ವಾಸವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News