ಕೊಡಗು ನೆರೆ ಹಾವಳಿ: ಉನ್ನತ ಶಿಕ್ಷಣ ಇಲಾಖೆ ಸಿಬ್ಬಂದಿಯಿಂದ ಒಂದು ದಿನದ ವೇತನ ದೇಣಿಗೆ

Update: 2018-08-21 14:19 GMT

ಬೆಂಗಳೂರು, ಆ.21: ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಭೀಕರ ನೆರೆ ಹಾವಳಿಯಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ನೆರವು ನೀಡಲು ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲ ವಿಶ್ವವಿದ್ಯಾಲಯಗಳು, ಕಾಲೇಜುಗಳು, ಪಾಲಿಟೆಕ್ನಿಕ್ ಸೇರಿದಂತೆ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿಗಳು ತಮ್ಮ ಒಂದು ದಿನದ ವೇತನವನ್ನು ಮುಖ್ಯಮಂತ್ರಿಯ ಪರಿಹಾರ ನಿಧಿಗೆ ನೀಡಲು ಮುಂದೆ ಬಂದಿದ್ದಾರೆ.

ಮಂಗಳವಾರ ನಗರದಲ್ಲಿ ಈ ಸಂಬಂಧ ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ನಮಗೆ ನೀರು ಕೊಡುತ್ತಿದ್ದ ಜಿಲ್ಲೆಯಲ್ಲಿ ಭೀಕರ ನೆರೆ ಉಂಟಾಗಿ ಮನೆಗಳು ಕುಸಿದಿದ್ದು, ಇಡೀ ಪ್ರದೇಶ ಜಲಾವೃತಗೊಂಡು, ಜನ ಜೀವನ ಅಸ್ತವ್ಯಸ್ತವಾಗಿದೆ ಎಂದರು.

ಕೊಡಗಿನ ಜನರಿಗೆ ಪರಿಹಾರ ಕಲ್ಪಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಅದರಂತೆ, ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ವಿಶ್ವವಿದ್ಯಾಲಯಗಳು, ಕಾಲೇಜುಗಳು, ಪಾಲಿಟೆಕ್ನಿಕ್ ಸೇರಿದಂತೆ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಒಂದು ದಿನದ ವೇತನ ನೀಡಲು ಮುಂದೆ ಬಂದಿದ್ದಾರೆ ಎಂದು ಅವರು ಹೇಳಿದರು.

ಪಿಇಎಸ್ ಕಾಲೇಜಿನ ದೊರೆಸ್ವಾಮಿ ಒಂದೂವರೆ ಕೊಟಿ ರೂ.ನೀಡಿದ್ದಾರೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾಗಿದ್ದ ನೆರೆ ಹಾವಳಿ ಸಂದರ್ಭದಲ್ಲಿ ನಿಧಿ ಸಂಗ್ರಹಿಸಿ ಸಂತ್ರಸ್ತರಿಗೆ ಮನೆಗಳನ್ನು ಕಟ್ಟಿ ಕೊಟ್ಟಿದ್ದರು. ಈಗ ನಾವು ಅದೇ ಮಾದರಿಯಲ್ಲಿ ನಿಧಿ ಸಂಗ್ರಹಿಸಿ ಉತ್ತಮವಾದ ಮನೆಗಳನ್ನು ಕಟ್ಟಿಕೊಡಲು ಮುಂದಾಗುತ್ತೇವೆ ಎಂದು ದೇವೇಗೌಡ ಹೇಳಿದರು.

ಸರಕಾರಿ ಕಾಲೇಜುಗಳಲ್ಲಿ 12 ಸಾವಿರ ಸಿಬ್ಬಂದಿಗಳಿದ್ದು, ಇತರೆ 8 ಸಾವಿರ ಮಂದಿ ಸಿಬ್ಬಂದಿಗಳಿದ್ದಾರೆ. ಒಟ್ಟಾರೆಯಾಗಿ 12 ಕೋಟಿ ರೂ.ಸಂಗ್ರಹವಾಗುವ ನಿರೀಕ್ಷೆಯಿದೆ. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ವೇಣುಗೋಪಾಲ್ ತಮ್ಮ ಒಂದು ತಿಂಗಳ ವೇತನ 2 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಅದೇ ರೀತಿ ರಾಜ್ಯದ ಎಲ್ಲ ವಿವಿಗಳ ಕುಲಪತಿಗಳು ತಮ್ಮ ವೇತನ ನೀಡಲಿದ್ದು, ಸುಮಾರು 50 ಲಕ್ಷ ರೂ.ಸಂಗ್ರಹವಾಗಲಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News