ಉನ್ನತ ದರ್ಜೆಗೇರಿಸುವ ಉದ್ದೇಶವೇ ಲಾಜಿಸ್ಟಿಕ್ಸ್ ನೀತಿ: ಸಚಿವ ಕೆ.ಜೆ.ಜಾರ್ಜ್

Update: 2018-08-21 14:21 GMT

ಬೆಂಗಳೂರು, ಆ.21: ಉದ್ದಿಮೆಗಳನ್ನು ಉನ್ನತ ದರ್ಜೆಗೇರಿಸುವ ಉದ್ದೇಶವನ್ನು ಕರ್ನಾಟಕ ಲಾಜಿಸ್ಟಿಕ್ಸ್ ನೀತಿ-2018 ಹೊಂದಿದೆ ಎಂದು ಐಟಿ ಬಿಟಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ಲಾಜಿಸ್ಟಿಕ್ಸ್ ನೀತಿ ಕುರಿತ ಸಮಾಲೋಚನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಲಾಜಿಸ್ಟಿಕ್ ನೀತಿಯಿಂದ ವಿಮಾನ ನಿಲ್ದಾಣ, ಬಂದರು, ಉಗ್ರಾಣ ಸೇರಿದಂತೆ ನಾನಾ ಉದ್ದಿಮೆಗಳಲ್ಲಿ ಸಂಪರ್ಕ ಹೆಚ್ಚಿಸಬಹುದು. ಜೊತೆಗೆ ಉದ್ದಿಮೆಗಳನ್ನು ಉನ್ನತ ದರ್ಜೆಗೇರಿಸುವ ಉದ್ದೇಶ ಇದೆ ಎಂದು ವಿವರಿಸಿದರು.

ತಂತ್ರಜ್ಞಾನದಲ್ಲಿಂದು ಬೆಂಗಳೂರು ನಗರ ಅತ್ಯಂತ ಮುಂದುವರೆದ ನಗರವಾಗಿದೆ ಎಂದು ವಿಶ್ವ ಸಂಸ್ಥೆಯೇ ಹೇಳಿದೆ. ಲಂಡನ್ ನಂತರ ಬೆಂಗಳೂರು ತಂತ್ರಜ್ಞಾನಕ್ಕೆ 4ನೆ ಉತ್ತಮ ನಗರವಾಗಿದೆ. ಇಲ್ಲಿ ಅನೇಕ ರೀತಿಯಲ್ಲಿ ತಂತ್ರಜ್ಞಾನ ಮುಂದುವರೆದಿದ್ದು ರೋಬೋಟಿಕ್, ನ್ಯಾನೋ ಟೆಕ್ನಾಲಜಿ, ಡ್ರೋನ್, 3ಡಿ ಪ್ರಿಂಟಿಂಗ್ ಇತರೆ ಸೇರಿದಂತೆ ಇದರೊಟ್ಟಿಗೆ ಲಾಜಿಸ್ಟಿಕ್‌ನಲ್ಲೂ ಮುಂದುವರೆಯಬೇಕೆಂದರು.

ನಮ್ಮಲ್ಲಿ 25 ವಿವಿಧ ಕ್ಷೇತ್ರಗಳಿಗೆ ಪಾಲಿಸಿ ಇರುವುದರಿಂದ, ಲಾಜಿಸ್ಟಿಕ್ಸ್ ಪಾಲಿಸಿ ಅಗತ್ಯ ಎಂದ ಅವರು, ನಮ್ಮ ರಾಜ್ಯ ಹೂಡಿಕೆ ಮಾಡಲು ಸಹ ಅನುಕೂಲವಾಗಿದ್ದು, ಹೂಡಿಕೆಯ ಜೊತೆಗೆ ಉದ್ಯೋಗಗಳನ್ನ ಸೃಷ್ಟಿ ಮಾಡುವುದು ಕೂಡ ಇದರ ಮುಖ್ಯ ಉದ್ದೇಶವಾಗಿದೆ ಎಂದು ಜಾರ್ಜ್ ತಿಳಿಸಿದರು.

ರೈತರ ಪರ: ರೈತರಿಗೂ ಈ ಲಾಜಿಸ್ಟಿಕ್ಸ್ ನೀತಿ ವರದಾನವಾಗಲಿದೆ. ರೈತರು ಬೆಳೆದಂತಹ ಉತ್ಪನ್ನಗಳನ್ನ ಶೇಖರಣೆ ಮಾಡಲು, ಜೊತೆಗೆ ಹಾಳಾಗದಂತೆ ಕಾಪಾಡಲು ಉಗ್ರಾಣ ನಿರ್ಮಾಣ ಕೂಡ ಅನುಕೂಲವಾಗಲಿದೆ. ಇಲ್ಲಿಯವರೆಗೆ ಲಾಜಿಸ್ಟಿಕ್ಸ್‌ನಲ್ಲಿ ಯಾವುದೇ ನೀತಿಗಳು ಇರಲಿಲ್ಲ. ಇದೇ ಮೊದಲು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News