ಬೆಂಗಳೂರು: ಬೃಹತ್ ಗಾಂಜಾ ಮಾರಾಟ ಜಾಲವನ್ನು ಭೇದಿಸಿದ ವೈಟ್‌ಫೀಲ್ಡ್ ಪೊಲೀಸರು

Update: 2018-08-21 16:48 GMT

ಬೆಂಗಳೂರು, ಆ.21: ಮಾದಕ ವಸ್ತು ಗಾಂಜಾ ಅಕ್ರಮವಾಗಿ ಸರಬರಾಜು ಮಾಡಿಕೊಂಡು, ನಗರದೆಲ್ಲೆಡೆ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ವೈಟ್‌ಫೀಲ್ಡ್ ವಿಭಾಗದ ಪೊಲೀಸರು, ಇಬ್ಬರು ಆರೋಪಿಗಳಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿ, ಒಟ್ಟು 12 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸಕೋಟೆಯ ಫಾರೂಕ್, ಕೆಆರ್‌ಪುರಂನ ಸಾದಿಕ್ ಶರೀಫ್ ಎನ್ನುವ ಪ್ರಮುಖ ಆರೋಪಿಗಳ ಮೇಲೆ ಗುಂಡು ಹಾರಿಸಿ ಸೆರೆ ಹಿಡಿಯಲಾಗಿದ್ದು, ಇವರೊಂದಿಗೆ ಸಂಪರ್ಕವನ್ನಿಟ್ಟುಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಮೊಹಿದ್ದುರ್ ಶೇಕ್, ಬಿಲಾಲ್, ಹಫೀಝ್, ಹಫೀಝ್ ಶೇಕ್, ಶುಕುರ್, ಅಸ್ಲಾಂ, ಶುಹಾಕ್, ಹಫೀಝ್ ಉಲ್ ಬಂಧಿತ ಆರೋಪಿಗಳಾಗಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್, ಮಂಗಳವಾರ ಸಂಜೆ ಆರೋಪಿಗಳಾದ ಫಾರೂಕ್, ಶರೀಫ್ ನಗರದ ಎಚ್‌ಎಎಲ್ ವ್ಯಾಪ್ತಿಯ ಬೋರ್‌ವೆಲ್ ಜಂಕ್ಷನ್ ಬಳಿ ಬೈಕ್‌ಯೊಂದರಲ್ಲಿ ಹೋಗುತ್ತಿರುವುದಾಗಿ ಬಂದ ಮಾಹಿತಿ ಆಧಾರಿಸಿ ಎಸ್ಸೈ ಸಾದಿಕ್ ಪಾಷಾ, ಪಿಎಸ್ಸೈ ಗುರುಪ್ರಸಾದ್, ಪೇದೆಗಳಾದ ರವಿಶಂಕರ್ ಸ್ಥಳಕ್ಕೆ ತೆರಳಿದ್ದಾರೆ.

ಅವರನ್ನು ಸೆರೆಹಿಡಿಯಲು ಮುಂದಾದಾಗ, ಇಬ್ಬರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಆದ್ದರಿಂದ ಆತ್ಮರಕ್ಷಣೆ ಸಲುವಾಗಿ ಎಸ್ಸೈ ಸಾದಿಕ್ ಪಾಷಾ, ಪಿಎಸ್ಸೈ ಗುರುಪ್ರಸಾದ್ ಪಿಸ್ತೂಲಿನಿಂದ ಆರೋಪಿಗಳ ಕಾಲಿಗೆ ಗುಂಡು ಹೊಡೆದಿದ್ದಾರೆ. ಬಳಿಕ ಅವರನ್ನು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಪೊಲೀಸರಿಗೂ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.

ಆಂಧ್ರದ ಚಿತ್ತೂರು ಜಿಲ್ಲೆಯ ವಿಕೋಟಾ ತಾಲೂಕಿನ ಎರ್ನಾಗಪಲ್ಲಿ ಎಂಬ ಗ್ರಾಮದಲ್ಲಿ ನಾಗರಾಜ್ ಎಂಬಾತನು ಕಾನೂನು ಬಾಹಿರವಾಗಿ ಗಾಂಜಾ ಬೆಳೆದು, ಸ್ಥಳೀಯರನ್ನು ಸಂಪರ್ಕಿಸಿ ಮಾರಾಟದಲ್ಲಿ ತೊಡಗಿದ್ದಾನೆ. ಇವನಿಂದ ಶಹಬಾಝ್ ಎಂಬಾತ ದೊಡ್ಡ ಪ್ರಮಾಣದಲ್ಲಿ ಗಾಂಜಾ ಖರೀದಿಸಿ, ಚಿಕ್ಕ-ಚಿಕ್ಕ ಪಟ್ಟಣ ಹಾಗೂ ತಿಂಡಿಗಳ ಪ್ಯಾಕೇಟ್‌ಗಳಲ್ಲಿ ಬೆಂಗಳೂರಿನ ಫಾರೂಕ್ ಹಾಗೂ ಸಾದಿಕ್ ಶರೀಫ್‌ಗೆ ರವಾನೆ ಮಾಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳಿಂದ ಒಟ್ಟು 5 ಕೆಜಿ ಗಾಂಜಾ, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದು, ಇಲ್ಲಿನ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ, ತಲೆಮರೆಸಿಕೊಂಡಿರುವ ಆರೋಪಿಗಳಾದ ನಾಗರಾಜು ಹಾಗೂ ಶಹಬಾಝ್ ಎಂಬುವರ ಪತ್ತೆಗಾಗಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಬ್ದುಲ್ ಅಹದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News