ಕೇರಳ ಮಾದರಿಯಲ್ಲಿ ದೇಣಿಗೆ ಸಂಗ್ರಹ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-08-21 17:23 GMT

ಬೆಂಗಳೂರು, ಆ.21: ಕೇರಳ ರಾಜ್ಯದಲ್ಲಿ ನೆರೆ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸುತ್ತಿರುವ ಮಾದರಿಯಲ್ಲೆ ನಮ್ಮ ರಾಜ್ಯದಲ್ಲೂ ಆನ್‌ಲೈನ್ ಪೋರ್ಟಲ್ ಆರಂಭಿಸಲಾಗಿದೆ. ಆದುದರಿಂದ, ದಾನಿಗಳು ನೇರವಾಗಿ ಮುಖ್ಯಮಂತ್ರಿಯ ಪರಿಹಾರ ಹಾಗೂ ಪ್ರಕೃತಿ ವಿಕೋಪ ನಿಧಿಗೆ ಹಣಕಾಸಿನ ನೆರವು ನೀಡಬಹುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಆಗಿರುವ ಅನಾಹುತಗಳ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಕ್ಕಾಗಿ ದೇಣಿಗೆ ನೀಡ ಬಯಸುವವರು ನೇರವಾಗಿ ಮುಖ್ಯಮಂತ್ರಿಯ ಪರಿಹಾರ ನಿಧಿಗೆ ಚೆಕ್‌ಗಳನ್ನು ನೀಡಬಹುದು. ಯಾರಿಗೂ ನಗದು ನೀಡಬೇಡಿ. ಅದು ದುರುಪಯೋಗವಾಗುವ ಸಾಧ್ಯತೆಗಳಿರುತ್ತವೆ ಎಂದರು.

ಕೊಡಗು ಜಿಲ್ಲೆಗೆ ಈ ಹಿಂದೆ ಘೋಷಿಸಿದ್ದ 100 ಕೋಟಿ ರೂ.ಗಳಲ್ಲಿ ಈಗಾಗಲೆ 30 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಪ್ರತಿಯೊಂದು ಕುಟುಂಬಕ್ಕೆ 3800 ರೂ.ಗಳನ್ನು ಅಗತ್ಯವಸ್ತಗಳನ್ನು ಪಡೆಯಲು ನೆರವು ನೀಡಲಾಗಿದೆ. ತಲಾ 10 ಸಾವಿರ ರೂ.ಗಳ ವೆಚ್ಚದಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸುವ ಕೆಲಸ ಶೀಘ್ರವೇ ಆರಂಭಿಸಲಾಗುವುದು ಎಂದು ಅವರು ಹೇಳಿದರು.

ಮಳೆಯಿಂದ ಆಗಿರುವ ಹಾನಿಯ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡು ಕೇಂದ್ರ ಸರಕಾರಕ್ಕೆ ವರದಿ ನೀಡಿ, ಹೆಚ್ಚಿನ ನೆರವು ಪಡೆಯಲು ಪ್ರಯತ್ನಿಸಲಾಗುವುದು. ಕೊಡಗು ಜಿಲ್ಲೆಗೆ ಮೊನ್ನೆ 200 ಕೋಟಿ ರೂ.ಗಳನ್ನು ಘೋಷಣೆ ಮಾಡಿದ್ದೆ. ಅದೇ ರೀತಿ, ಚಿಕ್ಕಮಗಳೂರು, ಮಂಗಳೂರು, ಉಡುಪಿ, ಶಿವಮೊಗ್ಗ, ಹಾಸನ ಜಿಲ್ಲೆಯ ಕೆಲ ಭಾಗಗಳಲ್ಲಿ ಆಗಿರುವ ಹಾನಿಗಾಗಿ ತಲಾ 25 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದರು.

ಮಳೆಯ ಪ್ರಮಾಣ ಬೆಳಗ್ಗೆಯಿಂದ ಸ್ವಲ್ಪ ಕಡಿಮೆಯಾಗಿದೆ. ಪರಿಹಾರ ಕಾರ್ಯ ಒದಗಿಸುವಲ್ಲಿ ಕೆಲವು ಲೋಪದೋಷಗಳು ಆಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದ್ದು, ಲೋಪದೋಷ ಸರಿಪಡಿಸಿ ಪರಿಹಾರ ಕಾರ್ಯ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಸಂತ್ರಸ್ತರ ಮನೆಗಳಲ್ಲಿ ಯಾರೂ ಇಲ್ಲದೆ ಇರುವುದನ್ನು ಗಮನಿಸಿ ಕೆಲವರು ದರೋಡೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ, ಪೊಲೀಸರು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸುವಂತೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಲು ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದರು.

ಕೊಡಗು ಜಿಲ್ಲೆಗೆ ಹೆಚ್ಚುವರಿ ಜಿಲ್ಲಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದು ಹಾಗೂ ಯಾವುದೇ ರೀತಿಯ ಅನಾನುಕೂಲಗಳಾಗದಂತೆ ಎಚ್ಚರವಹಿಸುವಂತೆ ಸೂಚನೆ ನೀಡಲಾಗಿದೆ. ಕುಶಾಲನಗರದಲ್ಲಿ ಮಳೆ ನೀರು ನಿಂತಿದ್ದ ಪ್ರದೇಶಗಳನ್ನು ಬಿಬಿಎಂಪಿ ಹಾಗೂ ಮೈಸೂರು ಪಾಲಿಕೆಯ ಕಾರ್ಮಿಕರು ಸ್ವಚ್ಛ ಮಾಡಿ, ಕ್ರಿಮಿನಾಶಕಗಳನ್ನು ಸಿಂಪಡಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಅಧಿಕೃತವಾಗಿ 7 ಜನ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. 4 ಜನ ನಾಪತ್ತೆಯಾಗಿದ್ದಾರೆ. ಸಂತ್ರಸ್ತರಿಗಾಗಿ ಬಂದಿರುವ ಆಹಾರ ಸಾಮಗ್ರಿಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಸರಕಾರಿ ವಾಹನಗಳ ಮೂಲಕ ಪ್ರತಿಯೊಂದು ಪಂಚಾಯತ್ ವ್ಯಾಪ್ತಿಯಲ್ಲಿರುವ ಹಳ್ಳಿಗಳಿಗೆ ರವಾನೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಶಾಲಾ ಮಕ್ಕಳಿಗೆ 20 ದಿನ ರಜೆ ಇತ್ತು. ಅವರ ಶಿಕ್ಷಣಕ್ಕೆ ತೊಂದರೆಯಾಗದಂತೆ ವಿಶೇಷ ತರಗತಿಗಳನ್ನು ನಡೆಸಲು ಸಮಯ ನಿಗದಿ ಮಾಡಲಾಗುವುದು. ಅಲ್ಲದೆ, ಮಕ್ಕಳಿಗೆ ಅಗತ್ಯವಿರುವ ಎಲ್ಲ ಪುಸ್ತಕಗಳನ್ನು ಸರಕಾರದ ವತಿಯಿಂದ ಪುನಃ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಡಾ.ಜಯಮಾಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎಂಎಸ್‌ಐಎಲ್ ವತಿಯಿಂದ ಒಂದು ಕೋಟಿ ರೂ., ಎಂಸಿಎ ವತಿಯಿಂದ ಒಂದು ಕೋಟಿ ರೂ., ಮೈಸೂರು ಎಲೆಕ್ಟ್ರಿಕಲ್ಸ್ ಲಿಮಿಡೆಟ್ ವತಿಯಿಂದ 25 ಲಕ್ಷ ರೂ., ಕೆಐಎಡಿಬಿ ವತಿಯಿಂದ ಒಂದು ಕೋಟಿ ರೂ., ಕಾರ್ಪೋರೇಷನ್ ಬ್ಯಾಂಕ್ ವತಿಯಿಂದ ಒಂದು ಕೋಟಿ ರೂ.ಗಳನ್ನು ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News