ನಿರಾಶ್ರಿತರ ನೆರವಿಗೆ ದೇವಸ್ಥಾನಗಳ ಹುಂಡಿ ಹಣ ನೀಡಲು ಆದೇಶ
Update: 2018-08-22 16:14 IST
ಬೆಂಗಳೂರು, ಆ. 22: ಸತತ ಮಳೆ, ಪ್ರವಾಹ ಹಾಗೂ ಗುಡ್ಡ ಕುಸಿತದಿಂದ ನಿರಾಶ್ರಿತರಾಗಿ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಹಾಗೂ ಕರಾವಳಿ ಜನತೆಗೆ ಪರಿಹಾರ ಕಲ್ಪಿಸಲು ಮುಜರಾಯಿ ಇಲಾಖೆ ದೇವಸ್ಥಾನಗಳ ಹುಂಡಿಯಲ್ಲಿ ಹಣ ನೀಡುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ನೆರೆ ಸಂತ್ರಸ್ತರಿಗೆ ರಾಜ್ಯದ ನಾನಾ ಭಾಗಗಳಿಂದ ದೇಣಿಗೆ,ಪರಿಹಾರ ಸಾಮಗ್ರಿಗಳು ಹರಿದು ಬರುತ್ತಿದೆ. ಅದೇರೀತಿ, ಮುಜರಾಯಿ ಇಲಾಖೆ, ದೇವಳಗಳ ಹುಂಡಿಯಲ್ಲಿನ 12.30 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದು, ಈ ಮೊತ್ತವನ್ನು ಇಲಾಖೆ ಖಾತೆಗೆ ಜಮೆ ಮಾಡಲು ನಿರ್ದೇಶನ ನೀಡಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ-3 ಕೋಟಿ ರೂ., ನಂಜನಗೂಡಿನ ಶ್ರೀಕಂಠೇಶ್ವರ, ಕಲ್ಲೂರು ಮೂಕಾಂಬಿಕಾ ಹಾಗೂ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ತಲಾ 1ಕೋಟಿ ರೂ., ಕಟೀಲು ದುರ್ಗಾ ಪರಮೇಶ್ವರಿ-75ಲಕ್ಷ ರೂ.ಸೇರಿದಂತೆ ರಾಜ್ಯದಲ್ಲಿನ 81 ದೇವಸ್ಥಾನಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದೆ.