×
Ad

ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಕೇರಳ-ಕೊಡಗು ನಿರಾಶ್ರಿತರಿಗೆ ದೇಣಿಗೆ ಸಂಗ್ರಹಿಸಿ ಮಾನವೀಯತೆ ಮೆರೆದರು

Update: 2018-08-22 20:58 IST

ಬೆಂಗಳೂರು, ಆ. 22: ತ್ಯಾಗ, ಬಲಿದಾನ, ಸಹಬಾಳ್ವೆಯ ಪ್ರತೀಕವೇ ಆಗಿರುವ ಬಕ್ರೀದ್ ಹಬ್ಬವನ್ನು ರಾಜ್ಯಾದ್ಯಂತ ಮುಸ್ಲಿಮರು ವಿಶೇಷ ಸಾಮೂಹಿಕ ಪ್ರಾರ್ಥನೆ ಸಲಿಸಿದರು.

ಈ ಮಧ್ಯೆ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಕೇರಳ ಮತ್ತು ಕೊಡಗು ಜಿಲ್ಲೆಯ ನಿರಾಶ್ರಿತರಿಗೆ ದೇಣಿಗೆ ಸಂಗ್ರಹಿಸುವ ಮೂಲಕ ಮಾನವೀಯತೆ ಮರೆದಿದ್ದಾರೆ.

ಬುಧವಾರ ಬೆಂಗಳೂರಿನ ಮೈಸೂರು ರಸ್ತೆ ಈದ್ಗಾ, ಖುದ್ದೂಸ್ ಈದ್ಗಾ, ಚಾಮರಾಜಪೇಟೆ ಈದ್ಗಾ, ಬಿಟಿಎಂ ಲೇಔಟ್ ಈದ್ಗಾ, ಸಿಟಿ ಮಾರ್ಕೆಟ್ ಜಾಮೀಯಾ ಮಸೀದಿ, ಗೋವಿಂದಪುರದ ದಾರುಲ್ ಉಲೂಮ್ ಸಬೀಲು ರ್ರಶಾದ್, ಕೌದೇನಗಳ್ಳಿ ಮೆಕ್ಕಾ ಮಸೀದಿ ಮೈದಾನ ಸೇರಿದಂತೆ ಬೆಂಗಳೂರಿನ 260ಕ್ಕೂ ಹೆಚ್ಚು ಕಡೆಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅದೇ ರೀತಿ ಮಂಗಳೂರು, ದಾವಣಗೆರೆ, ಮೈಸೂರು, ಕಾರವಾರ, ಬೆಳಗಾವಿ, ಹೊಸಪೇಟೆ, ರಾಮನಗರ, ಹುಬ್ಬಳ್ಳಿ-ಧಾರವಾಡ, ಬೀದರ್, ಕಲಬುರ್ಗಿ, ರಾಯಚೂರು ಸೇರಿದಂತೆ ರಾಜ್ಯದ ಹಲವೆಡೆ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಬೆಂಗಳೂರು ಸೇರಿದಂತೆ ಅನಂತರ ಎಲ್ಲ ಕಡೆಗಳಲ್ಲಿ ಮುಸ್ಲಿಮರು ಹಾಗೂ ಮಸೀದಿ ಪ್ರಮುಖರು, ಮಳೆ, ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಕೇರಳ ಮತ್ತು ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ನೆರವು ನೀಡಿ ಎಂದು ದೇಣಿಗೆ ಸಂಗ್ರಹಿಸಿದ್ದಾರೆ.  ರಾಯಚೂರಿನಲ್ಲಿ ಜಮಾತ್ ಇ ಇಸ್ಲಾಮಿ ಹಿಂದ್ ಸಂಘಟನೆಯ ಕಾರ್ಯಕರ್ತರು ಪ್ರವಾಹ ಸಂತ್ರಸ್ತರಿಗೆ ನೆರವಿಗೆ ದೇಣಿಗೆ ಸಂಗ್ರಹಿಸುವ ವ್ಯವಸ್ಥೆ ಮಾಡಿದ್ದರು. ‘ನೆರೆ ಸಂತ್ರಸ್ತರೊಂದಿಗೆ ಈದ್ ಸಂತೋಷ ಹಂಚಿಕೊಳ್ಳಿರಿ’ ಎನ್ನುವ ಫಲಕ ಹಿಡಿದಿದ್ದು ಕಂಡುಬಂತು. ಕೇರಳ ಮತ್ತು ಕೊಡಗು ನೆರೆ ಸಂತ್ರಸ್ತರಿಗೆ ನೆರವಾಗೋಣ, ನಮ್ಮ ಕೈಯಿಂದಾದ ಸಹಾಯ ಮಾಡೋಣ ಎನ್ನುವ ಕೋರಿಕೆ ಅಲ್ಲಿತ್ತು. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಅನೇಕ ಮುಸ್ಲಿಮರು ದೇಣಿಗೆ ಪೆಟ್ಟಿಗೆಗೆ ಹೆಚ್ಚಿನ ಹಣ ಹಾಕಿ ನೆರವು ನೀಡಿದರು.

‘ಬಕ್ರೀದ್ ಹಬ್ಬವೂ ತ್ಯಾಗ ಬಲಿದಾನಗಳ ಪ್ರತೀಕವಾಗಿದ್ದು, ನಮ್ಮ ಬದುಕಿನಲ್ಲಿಯೂ ಈ ಗುಣಗಳನ್ನು ಅಳವಡಿಸಿಕೊಳ್ಳೋಣ. ಪ್ರಕೃತಿಯ ಮುನಿಸಿನಿಂದ ಸಂಕಷ್ಟಕ್ಕೆ ಸಿಲುಕಿರುವ ಜನತೆಯ ನೆರವಿಗೆ ಧಾವಿಸಲು ಈ ಹಬ್ಬ ಸ್ಫೂರ್ತಿಯಾಗಲಿ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಶುಭಾ ಕೋರಿದ್ದಾರೆ.

ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಇಲ್ಲಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು, ಶುಭಾಶಯ ಕೋರಿದರು. ‘ತ್ಯಾಗ, ಬಲಿದಾನದ ಜೊತೆಗೆ ವಿಶ್ವ ಬ್ರಾತೃತ್ವವನ್ನು ಸಾರುವ ಪವಿತ್ರ ಬಕ್ರೀದ್ ಹಬ್ಬವು ನಾಡಿನಲ್ಲಿ ಸ್ನೇಹ-ಸೌಹಾರ್ದತೆಯನ್ನು ಬೆಳೆಸಲು ಪ್ರೇರಣೆ ನೀಡಲಿ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಜನತೆಗೆ ಬಕ್ರೀದ್ ಹಬ್ಬದ ಶುಭಾ ಹಾರೈಸಿದ್ದಾರೆ.

‘ತ್ಯಾಗ-ಬಲಿದಾನದ ಸಂಕೇತವಾಗಿ ನಡೆಯುವ ಪವಿತ್ರ ಬಕ್ರೀದ್ ಹಬ್ಬವೂ ನಾಡಿನಲ್ಲಿ ಸೌಹಾರ್ದ ವಾತಾವರಣ ನೆಲೆಸಿ ಸಕಲ ಮಾನವ ಕುಲಕ್ಕೆ ಒಳಿತಾಗಲಿ’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶುಭ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News