ಅಜ್ಮೀರ್ ದರ್ಗಾಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ
Update: 2018-08-23 20:12 IST
ಬೆಂಗಳೂರು, ಆ. 23: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಕುಟುಂಬದೊಂದಿಗೆ ರಾಜಸ್ಥಾನದ ಅಜ್ಮೀರ್ ದರ್ಗಾ ಸೇರಿದಂತೆ ಉತ್ತರ ಭಾರತದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ್ದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಗುರುವಾರ ಬೆಳಗ್ಗೆ ವಿಶೇಷ ವಿಮಾನದ ಮೂಲಕ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ಸಿಎಂ ಕುಮಾರಸ್ವಾಮಿ ಅಜ್ಮೀರ್‌ಗೆ ತೆರಳಿದರು.
ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಪುಷ್ಕರ್‌ಗೆ ಭೇಟಿ ನೀಡಿ ಬ್ರಹ್ಮ ದೇವಾಲಯದಲ್ಲಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಅನಂತರ ಅಜ್ಮೀರ್ ದರ್ಗಾಗೆ ಭೇಟಿ ನೀಡಿ ಚಾದರವನ್ನು ಅರ್ಪಿಸಿದ್ದಾರೆ.
ಇತ್ತೀಚೆಗೆ ಹಾಸನ ಜಿಲ್ಲೆಯ ಹೊಳೆನರಸೀಪುರದ ಹರದನಹಳ್ಳಿಯ ಈಶ್ವರ ದೇಗುಲ ಸಂದರ್ಶಿಸಿ, ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಇದೀಗ ಉತ್ತರ ಭಾರತದ ದೇವಸ್ಥಾನ ಮತ್ತು ದರ್ಗಾಕ್ಕೆ ಭೇಟಿ ನೀಡಿದ್ದಾರೆ.