ಆರನೇ ವೇತನ ಆಯೋಗದ 2ನೇ ಆವೃತ್ತಿ ಅನುಷ್ಠಾನ ಸಂಬಂಧ ಸಿಎಂ ಜೊತೆ ಚರ್ಚೆ: ಸಚಿವ ಡಿಕೆಶಿ

Update: 2018-08-23 16:10 GMT

ಬೆಂಗಳೂರು, ಆ.23: ಆರನೇ ವೇತನ ಆಯೋಗದ ಎರಡನೇ ಆವೃತ್ತಿ ಅನುಷ್ಠಾನದ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚಿಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಗುರುವಾರ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಬೇರೆ ರಾಜ್ಯಗಳಲ್ಲಿ ಹೊಸ ಪಿಂಚಣಿ ಯೋಜನೆ ಯಾವ ಸ್ಥಿತಿಯಲ್ಲಿದೆ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದೆ. ಮುಖ್ಯಮಂತ್ರಿಗಳು, ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಸಾಧ್ಯವಾದಷ್ಟು ಬೇಗ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯ ಸರಕಾರವು ಈ ಹಿಂದೆಯೂ ಸರಕಾರಿ ನೌಕರರಿಗೆ ಹಲವಾರು ರೀತಿಯಲ್ಲಿ ಸ್ಪಂದಿಸಿದೆ. ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಸರಕಾರ ಬದ್ಧವಿದೆ ಎಂದು ತಿಳಿಸಿದರು.

ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಮಾತನಾಡಿ, ಎನ್‌ಪಿಎಸ್ ರದ್ದುಗೊಳಿಸುವುದಾಗಿ ಪಕ್ಷದ ಪ್ರಣಾಳಿಕೆಯಲ್ಲಿಯೇ ಘೋಷಿಸಿರುವುದರಿಂದ ಸರಕಾರವು ಬದ್ಧವಿದೆ. ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಅನುಭವಿ ಅಧಿಕಾರಿಗಳು ಸರಕಾರಕ್ಕೆ ಸಲಹೆಗಳನ್ನು ನೀಡಬೇಕು ಎಂದರು.

ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಮಾತನಾಡಿ, ಸಾಮಾಜಿಕ ನ್ಯಾಯ, ಬದ್ಧತೆ ಎಂದು ಹೋದ ಕಡೆಗೆ ಎಲ್ಲಾ ಹೇಳಿಕೊಂಡು ಸುತ್ತಾಡಿದರೆ ಸಾಕಾಗುವುದಿಲ್ಲ, ತಮ್ಮ ಸ್ವಂತ ಕ್ಷೇತ್ರದಲ್ಲಿರುವ ಸಮುದಾಯದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು. ಆಗ ಜನರು ಸ್ವಯಂ ಪ್ರೇರಣೆಯಿಂದ ಮತ ಹಾಕುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನ ಎದುರು ಶ್ರೀಮಂತರು, ರಾಜ ವಂಶಸ್ಥರು, ದೊಡ್ಡ ಮುಖಂಡರು ಎದುರಾಳಿಯಾಗಿದ್ದರು. ಆದರೆ, ತಳ ಸಮುದಾಯದ, ಹಿಂದುಳಿದ, ಬಡವರ ಜತೆ ಬೆರೆಯದ ಕಾರಣ ಸೋಲು ಅನುಭವಿಸಬೇಕಾಯಿತು ಎಂದು ಹೇಳಿದರು.

ಸರಕಾರಿ ನೌಕರರು ಶಾಸಕರು, ಸಚಿವರು, ಅವರ ಬೆಂಬಲಿಗರಿಗೆ ಕೆಲಸ ಮಾಡುವುದನ್ನು ನಿಲ್ಲಿಸಿ, ತಮ್ಮ ಕಚೇರಿಗೆ ಬರುವ ಬಡವರಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಸನ್ಮಾನ ಕಾರ್ಯಕ್ರಮದಲ್ಲಿ ಬೇಡಿಕೆಗಳನ್ನು ಇಡದೆ, ನೇರವಾಗಿ ಸರಕಾರದ ಮುಂದಿಡಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮಂಜೇಗೌಡ, ಸಂಘದ ಅಧ್ಯಕ್ಷ ಎಚ್.ಕೆ. ರಾಮು, ಮಾಲತೇಶ್ ವಿ. ಅಣ್ಣಿಗೇರಿ, ಪ್ರಾಥಮಿಕ ಶಾಲಾ ರಾಷ್ಟ್ರೀಯ ಸಂಘದ ಉಪಾಧ್ಯಕ್ಷ ಬಸವರಾಜ ಗುರಿಕಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸರಕಾರಿ ನೌಕರರ ಸಂಘದ ಶತಮಾನೋತ್ಸವ ಭವನ ನಿರ್ಮಾಣಕ್ಕಾಗಿ ಹೊಸಕೆರೆಹಳ್ಳಿಯ ಪಿಇಎಸ್ ಕಾಲೇಜು ಮುಂಭಾಗವಿರುವ ಜಾಗವನ್ನು ಸರಕಾರದ ವತಿಯಿಂದ ಮಂಜೂರು ಮಾಡಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಪರಿಹಾರ ನಿಧಿಗೆ 102 ಕೋಟಿ ರೂ.

ಪ್ರಕೃತಿ ವಿಕೋಪದಿಂದ ಉಂಟಾಗಿರುವ ಹಾನಿ ತುಂಬುವುದಕ್ಕಾಗಿ ಮತ್ತು ಪುನರ್ವಸತಿ ಕಲ್ಪಿಸುವುದಕ್ಕಾಗಿ ರಾಜ್ಯ ಸರಕಾರಿ ನೌಕರರ ಒಂದು ದಿನದ ವೇತನವನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ 5.25 ಲಕ್ಷ ನೌಕರರಿದ್ದು, ಒಂದು ದಿನದ ವೇತನ 102 ಕೋಟಿ ರೂ.ಗಳನ್ನು ನೀಡಲಾಗುತ್ತಿದೆ.

-ಎಚ್.ಕೆ. ರಾಮು, ಸರಕಾರಿ ನೌಕರರ ಸಂಘದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News