ವೇತನಾನುದಾನ ಸಮಸ್ಯೆ ಬಗೆಹರಿಸಲು ಒತ್ತಾಯ: 39 ದಿನಗಳಿಂದ ಧರಣಿ ನಡೆಸುತ್ತಿರುವ ಶಿಕ್ಷಕರು
ಬೆಂಗಳೂರು, ಆ.23: ರಾಜ್ಯ ಸರಕಾರ ಈ ಕೂಡಲೇ ವೇತನಾನುದಾನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಬರೋಬ್ಬರಿ 39 ದಿನಗಳಿಂದ ನೂರಾರು ಶಾಲಾ ಶಿಕ್ಷಕರು, ಬೆಂಗಳೂರಿನಲ್ಲಿ ಬೀಡುಬಿಟ್ಟು ಧರಣಿ ನಡೆಸುತ್ತಿದ್ದರೂ, ಸರಕಾರದ ಕಡೆಯಿಂದ ಇದುವರೆಗೂ ಯಾವುದೇ ಭರವಸೆ ದೊರೆತಿಲ್ಲ ಎಂದು ಸತ್ಯಾಗ್ರಹಿಗಳು ತಿಳಿಸಿದರು.
ನಗರದ ಸ್ವಾತಂತ್ರ ಉದ್ಯಾನ ವನದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ವರದರಾಜ್ 39ನೆ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿ, ರಾಜ್ಯದ 90ಕ್ಕೂ ಅಧಿಕ ಶಾಲೆಗಳ 200ಕ್ಕೂ ಹೆಚ್ಚು ಶಿಕ್ಷಕರು ಸತತ 39 ದಿನಗಳಿಂದ ಧರಣಿ ನಡೆಸುತ್ತಿದ್ದು, ಇದುವರೆಗೂ ಮನೆಗೆ ತಲುಪದೆ ಹೋರಾಟದಲ್ಲಿ ನಿರತರಾಗಿದ್ದೇವೆ ಎಂದು ಹತಾಶೆ ವ್ಯಕ್ತಪಡಿಸಿದರು.
1987ರ ಪೂರ್ವದಲ್ಲಿ ಪ್ರಾರಂಭವಾಗಿ ನಿರಂತರ ಶಿಕ್ಷಣ ಸೇವೆ ಒದಗಿಸುತ್ತಾ ಬಂದಿರುವ ಶಾಲೆಗಳು ಸರಕಾರದ ಆದೇಶದ ಮೇರೆಗೆ ಅನುದಾನಕ್ಕೆ ಒಳಪಟ್ಟಿವೆ. ಇನ್ನುಳಿದ 94 ಪ್ರಾಥಾಮಿಕ ಮತ್ತು ಪ್ರೌಢ ಶಾಲೆಗಳನ್ನು ಸರಕಾರ ಪರಿಶೀಲನೆ ನಡೆಸಿದೆ. ಆದರೆ, ಆರ್ಥಿಕ ಇಲಾಖೆಯು ಹಾಕಿರುವ ಅನಧಿಕೃತ ಟಿಪ್ಪಣಿ ಶಾಲೆ ಮತ್ತು ಶಿಕ್ಷಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. 94 ಶಾಲೆಗಳ ಶಿಕ್ಷಕರಿಗೆ ವೇತಾನುದಾನವಿಲ್ಲದೇ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಬಗ್ಗೆ ಸರಕಾರ ಎಚ್ಚೆತ್ತುಕೊಂಡು ಬಡ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ. 39 ದಿನಗಳಾದರು ಈ ಬಗ್ಗೆ ಯಾರೊಬ್ಬ ಸಚಿವರಾಗಲಿ, ಅಧಿಕಾರಿಗಳಾಗಲಿ ಗಮನ ಹರಿಸುತ್ತಿಲ್ಲ ಎಂದು ನೊಂದ ಧರಣಿ ನಿರತರು ಬೇಸರ ವ್ಯಕ್ತಪಡಿಸಿದರು.