×
Ad

ಸರಕಾರಿ ಯೋಜನೆಗಳು ಅರ್ಹರಿಗೆ ತಲುಪುವಲ್ಲಿ ವಿಫಲ: ಐವನ್ ಡಿಸೋಜ

Update: 2018-08-23 22:36 IST

ಬೆಂಗಳೂರು, ಆ.23: ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರಕಾರದಿಂದ ಜಾರಿ ಮಾಡಿರುವ ಯೋಜನೆಗಳು ಸರಿಯಾದ ಮಾಹಿತಿ ಕೊರತೆಯಿಂದಾಗಿ ಅರ್ಹರಿಗೆ ತಲುಪುವಲ್ಲಿ ವಿಫಲವಾಗುತ್ತಿವೆ ಎಂದು ವಿಧಾನಪರಿಷತ್ ಸದಸ್ಯ ಡಾ.ಐವನ್ ಡಿಸೋಜ ಹೇಳಿದ್ದಾರೆ.

ಅನನ್ಯ ಶೈಕ್ಷಣಿಕ ಮತ್ತು ಸಬಲೀಕರಣ ಸಂಸ್ಥೆ ವತಿಯಿಂದ ನಗರದ ಐಎಸ್‌ಐನಲ್ಲಿ ಆಯೋಜಿಸಿದ್ದ ‘ಕ್ರೈಸ್ತ ಧಾರ್ಮಿಕ ಅಲ್ಪಸಂಖ್ಯಾತರಿಗಿರುವ ಸಾಂವಿಧಾನಿಕ ಹಕ್ಕುಗಳು ಮತ್ತು ಸರಕಾರ ಅಭಿವೃದ್ಧಿ ಯೋಜನೆಗಳು’ ವಿಷಯ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದು ಅಧಿಕಾರಗಳ ಕರ್ತವ್ಯ. ಆದರೆ, ಅವರ ನಿರ್ಲಕ್ಷದಿಂದಾಗಿ ನೈಜ ಫಲಾನುಭವಿಗಳಿಗೆ ಮಾಹಿತಿಯೇ ಸಿಗುತ್ತಿಲ್ಲ ಎಂದರು.

ಅಧಿಕಾರಿಗಳು ತಮ್ಮ ಅಮೂಲ್ಯವಾದ ಸೇವೆಯನ್ನು ಸಾರ್ವಜನಿಕರಿಗಾಗಿ ಮೀಸಲಿಡಬೇಕು. ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ಸಿಗುವಂತೆ ಮಾಡಬೇಕು. ಇದಕ್ಕೆ ಜನರ ಸಹಾಯವೂ ಅಗತ್ಯವಿದೆ ಎಂದ ಅವರು, ಇಂದಿಗೂ ಕ್ರೈಸ್ತ ಸಮುದಾಯದವರಿಗೆ ಸಿಗಬೇಕಾದ ಅನೇಕ ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಯವರೆಗೂ ತಲುಪಿಲ್ಲ ಎಂದರು.

ರಾಜ್ಯ ಸರಕಾರದಿಂದ ಅಲ್ಪಸಂಖ್ಯಾತ ಮಕ್ಕಳಿಗಾಗಿ ವೃತ್ತಿ ತರಬೇತಿ ಯೋಜನೆ, ನರ್ಸಿಂಗ್ ತರಬೇತಿ, ಕಾನೂನು ಪದವೀದರರಿಗೆ ತರಬೇತಿ ಸೇರಿದಂತೆ ಹಲವು ಶೈಕ್ಷಣಿಕ ತರಬೇತಿಗಳು, ಅನಾಥಾಲಯಗಳಿಗೆ ಅನುದಾನ, ವಿಚ್ಛೇದಿತ ಮಹಿಳೆಯರಿಗಾಗಿ ಬಿದಾಯಿ ಯೋಜನೆ, ಕೌಶಲ್ಯ ಅಭಿವೃದ್ಧಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳಿದ್ದರೂ ಅದನ್ನು ಎಲ್ಲರಿಗೂ ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ರಾಜ್ಯಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ವೈ.ಮರಿಸ್ವಾಮಿ ಮಾತನಾಡಿ, ಕ್ರೈಸ್ತ ಸಮುದಾಯದ ಜನರು ಇಂದಿಗೂ ಅತ್ಯಂತ ಹೀನಾಯವಾದ ಸ್ಥಿತಿಯಲ್ಲಿ ಜೀವನ ನಡೆಸುವಂತಾಗಿದೆ. ಸರಕಾರಗಳಿಂದ ಹಣಕಾಸಿನ ನೆರವು ಸಿಕ್ಕರೂ, ಅದು ತಲುಪಬೇಕಾದವರಿಗೆ ತಲುಪದೇ ಇರುವುದರಿಂದ ಇಂದಿಗೂ ಅವರ ಬದುಕು ಉತ್ತಮವಾಗಿಲ್ಲ ಎಂದು ತಿಳಿಸಿದರು.

ಅಲ್ಪಸಂಖ್ಯಾತರಲ್ಲಿ ಬರುವ ಕ್ರೈಸ್ತ ಸಮುದಾಯದ ಜನರು ಇಂದಿಗೂ ಗುಡಿಸಲುಗಳಲ್ಲಿ ಅತ್ಯಂತ ಕೆಳ ಹಂತದಲ್ಲಿ ಜೀವಿಸುತ್ತಿದ್ದು, ಸಂವಿಧಾನಾತ್ಮಕವಾಗಿ ಸಿಗಬೇಕಾದ ಹಕ್ಕುಗಳು ಸಿಗುತ್ತಿಲ್ಲ. ಹೀಗಾಗಿ, ಸಮಾಜದ ಕಟ್ಟಕಡೆಯಲ್ಲಿರುವ ವ್ಯಕ್ತಿಗೂ ಸಮಾನವಾದ ಅವಕಾಶಗಳು, ಹಕ್ಕುಗಳು ಸಿಕ್ಕಿದಾಗ ಮಾತ್ರ ನಿಜವಾದ ಪ್ರಜಾಪ್ರಭುತ್ವ ಎನಿಸಿಕೊಳ್ಳುತ್ತದೆ. ಅದಕ್ಕಾಗಿ ಪ್ರಬಲವಾದ ಹೋರಾಟ ರೂಪಿಸಬೇಕಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಭಾರತೀಯ ಸಾಮಾಜಿಕ ಸಂಸ್ಥೆಯ ಮಾನವ ಹಕ್ಕುಗಳ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ಡಾ.ಆಲ್ಪಿನ್, ರಾಷ್ಟ್ರೀಯ ಕಾನೂನು ಶಾಲೆಯ ಪ್ರೊ.ಬಾಬು ಮ್ಯಾಥ್ಯೂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News