ವೇಗವಾಗಿ ಬೆಳೆಯುತ್ತಿರುವ ಪಟ್ಟಿಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ವಿಶ್ವದಲ್ಲಿ 2 ನೆ ಸ್ಥಾನ

Update: 2018-08-23 17:15 GMT
ಕೆಂಪೇಗೌಡ ವಿಮಾನ ನಿಲ್ದಾಣ

ಬೆಂಗಳೂರು, ಆ.23: ಪ್ರಯಾಣಿಕರ ಸಂಖ್ಯೆ ಹೆಚ್ಚಳದಲ್ಲಿ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎರಡನೇ ಅತಿದೊಡ್ಡ ವಿಮಾನ ನಿಲ್ದಾಣವೆನಿಸಿಕೊಂಡಿದೆ.

2018 ಜನವರಿಯಿಂದ ಜೂನ್‌ವರೆಗೆ 1,58,50,352 ಪ್ರಯಾಣಿಕರು ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ 41,80,852 ಜನರು ಪ್ರಯಾಣಿಸಿದ್ದಾರೆ.

ಮೊದಲ ಸ್ಥಾನದಲ್ಲಿ ಟೋಕ್ಯೋದ ಹನೆಡಾ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಜಾಗತಿಕ ಮಟ್ಟದಲ್ಲಿ ವಿಮಾನ ನಿಲ್ದಾಣಗಳ ಗುಣಮಟ್ಟವನ್ನು ಗುರುತಿಸುವ ರೂಟ್ಸ್ ಆನ್ ಲೈನ್ ಕಂಪೆನಿ ತನ್ನ ವರದಿಯನ್ನು ಪ್ರಕಟಿಸಿದ್ದು, ಕಳೆದ ಆರು ತಿಂಗಳಲ್ಲಿ ವಿಮಾನ ನಿಲ್ದಾಣದಲ್ಲಿ 2.5 ದಶಲಕ್ಷಕ್ಕಿಂತ ಹೆಚ್ಚು ಪ್ರಯಾಣಿಕರು ಹಾರಾಟ ನಡೆಸಿದ ವಿಮಾನ ನಿಲ್ದಾಣವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

ಜನವರಿಯಿಂದ ಜೂನ್‌ವರೆಗೆ ಹನೆಡಾ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ 4,32,88,588 ಪ್ರಯಾಣಿಕರು ಹಾರಾಟ ನಡೆಸಿದ್ದಾರೆ. ಜಕಾರ್ತದ ಸಿಜಿಕೆ ವಿಮಾನ ನಿಲ್ದಾಣದಿಂದ 39,01,806 ಪ್ರಯಾಣಿಕರು ಸಂಚರಿಸಿದ್ದಾರೆ.

ದೆಹಲಿಯ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ 6ನೇ ಸ್ಥಾನದಲ್ಲಿ, ಹೈದರಾಬಾದ್ ವಿಮಾಣ ನಿಲ್ದಾಣ ಪ್ರಯಾಣಿಕರ ಹಾರಾಟ ಸಂಖ್ಯೆಯಲ್ಲಿ 17ನೇ ಸ್ಥಾನದಲ್ಲಿದೆ. ಆದರೆ ಪ್ರಯಾಣಿಕರ ಹಾರಾಟ ಸಂಖ್ಯೆ ಹೆಚ್ಚಳದಲ್ಲಿ ಮಾತ್ರ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ 8ನೇ ಸ್ಥಾನದಲ್ಲಿದೆ. ಚೀನಾದ ಕ್ವಾನ್ಝೋ ಜಿನ್ಜಿಯಾಂಗ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಮೊದಲ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News