×
Ad

ಕಸ ಸಂಸ್ಕರಣಾ ಘಟಕ ಸ್ಥಾಪನೆಗೆ ಚಿಂತನೆ: ಡಾ.ರಾಜೇಂದ್ರಕುಮಾರ್

Update: 2018-08-23 23:03 IST

ಬೆಂಗಳೂರು, ಆ.23: ಕರ್ನಾಟಕ ಸಹಕಾರ ಮಹಾಮಂಡಳಿಯಿಂದ ವ್ಯಾಪಾರ ಚಟುವಟಿಕೆಗಳನ್ನು ವಿಸ್ತರಿಸುವ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಕಸ ಸಂಸ್ಕರಿಸಲು ಸಂಸ್ಕರಣಾ ಘಟಕವನ್ನು ಪ್ರಾರಂಭಿಸಿ ಆ ಮೂಲಕ ಗೊಬ್ಬರ ತಯಾರಿಸಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ವಿತರಣೆ ಮಾಡುವ ಕುರಿತು ಚಿಂತನೆ ಮಾಡಲಾಗುತ್ತಿದೆ ಎಂದು ಮಹಾಮಂಡಳಿ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರಕುಮಾರ್ ತಿಳಿಸಿದ್ದಾರೆ.

ಸಹಕಾರ ಮಹಾಮಂಡಳಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಈಗಾಗಲೇ ನೆರವು ಮತ್ತು ಮಾರ್ಗದರ್ಶನ ಕೋರಿ ಬೆಂಗಳೂರು ಮಹಾನಗರಪಾಲಿಕೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು.

ರಾಜ್ಯದ ರೈತರಿಗೆ ಬೇಕಾಗುವ ರಸಗೊಬ್ಬರ ಕೀಟನಾಶಕಗಳನ್ನು ಸಹಕಾರ ಸಂಘಗಳ ಮೂಲಕ ವಿತರಣೆ ಮಾಡುವುದು ಮತ್ತು ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆ ನೀಡಿ ಖರೀದಿ ಮಾಡುವುದರ ಜೊತೆಗೆ ಸ್ವಂತ ಬಂಡವಾಳ ಹೂಡಿ ರೈತ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುತ್ತಿದೆ ಎಂದು ತಿಳಿಸಿದರು.   

ಸಂಸ್ಥೆಯು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಒಟ್ಟು 39 ಶಾಖೆಗಳನ್ನು ಹೊಂದಿದ್ದು ತನ್ನದೇ ಆದ ಸಂಪನ್ಮೂಲಗಳನ್ನು ಕ್ರೋಡೀಕರಿಸಿಕೊಂಡಿದೆ. ಅಲ್ಲದೆ, ಉತ್ತಮವಾಗಿ ವ್ಯವಹಾರ ವಹಿವಾಟು ನಡೆಸುತ್ತಾ ಬಂದಿದೆ. ಕಳೆದ 10 ವರ್ಷಗಳಿಂದಲೂ ಸಂಸ್ಥೆಯು ಲಾಭಗಳಿಸುತ್ತಾ ಬಂದಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ತನ್ನದೇ ಆದ ಸ್ವಂತ ಗೋದಾಮು ಮತ್ತು ಕಟ್ಟಡಗಳನ್ನು ಹೊಂದಿದೆ. ರೈತರಿಗೆ ಕೃಷಿ ಪರಿಕರಗಳು ಮತ್ತು ರೈತರು ಬೆಳೆದ ಕೃಷಿ ಉತ್ಪನ್ನ ಶೇಖರಣೆ ಮಾಡಲು ಎಲ್ಲ ಸೌಲಭ್ಯಗಳನ್ನು ಹೊಂದಿದೆ ಎಂದು ಅವರು ತಿಳಿಸಿದರು. ಕರ್ನಾಟಕ ಸಹಕಾರ ಮಾರಾಟ ಮಂಡಳಿಯು ಸರಕಾರದ ಪರವಾಗಿ ರೈತರಿಗೆ ರಸಗೊಬ್ಬರ ವಿತರಣೆ ಮಾಡುವ ಸಂಬಂಧ ರಾಜ್ಯ ಸರಕಾರದ ಕಾಪು ದಾಸ್ತಾನು ಯೋಜನೆಯನ್ನು ನಿರ್ಮಾಣ ಮಾಡುತ್ತಿದೆ ಹಾಗೂ ಸ್ವಂತ ಬಂಡವಾಳದಿಂದ 2017-18 ನೇ ಸಾಲಿನಲ್ಲಿ ರೈತರಿಗೆ 232.57 ಕೋಟಿ ರೂ. ಮೌಲ್ಯದ ರಸಗೊಬ್ಬರ ಹಾಗೂ ಕೃಷಿ ಸಲಕರಣೆಗಳನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದರು.

ಪ್ರತಿ ವರ್ಷ ರಾಜ್ಯದಲ್ಲಿ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಲಾಗುತ್ತಿದ್ದು, 2016-17 ನೆ ಸಾಲಿನಲ್ಲಿ 1030 ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ರೈತರಿಂದ ಖರೀದಿ ಮಾಡಲಾಗಿದೆ. 2017-18 ನೇ ಸಾಲಿನಲ್ಲಿ 2645.90 ಕೋಟಿ ರೂ. ಮೌಲ್ಯದ ಉತ್ಪನ್ನಗಳ ವಹಿವಾಟು ಕೈಗೊಳ್ಳಲಾಗಿದೆ ಎಂದರು.

ಮುಂಬರುವ ದಿನಗಳಲ್ಲಿ ರಾಜ್ಯದ 177 ಮತ್ತು ಹೊಸದಾಗಿ ರಚಿತವಾಗಿರುವ ತಾಲೂಕು ಕೇಂದ್ರಗಳಲ್ಲಿ ಮಹಾಮಂಡಳವು ತನ್ನ ಶಾಖಾ ಕಚೇರಿಗಳನ್ನು ತೆರೆಯುವ ಮೂಲಕ ರಸಗೊಬ್ಬರ ಹಾಗೂ ಕೃಷಿ ಪರಿಕರಗಳ ವಿತರಣೆ ಜೊತೆಗೆ ರೈತರಿಗೆ ಉತ್ತಮ ಗುಣಮಟ್ಟದ ಸಾವಯವ ಗೊಬ್ಬರ ವಿತರಣೆಗೆ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಡಳಿಯ ಉಪಾಧ್ಯಕ್ಷ ಬಸವನಗೌಡ ರಾಮೇಗೌಡ ಪಾಟೀಲ್, ವ್ಯವಸ್ಥಾಪಕ ನಿರ್ದೇಶಕ ಜೆ.ಆರ್.ಷಣ್ಮುಖಪ್ಪ, ಡಿ.ಎಲ್. ಮಂಜುನಾಥ, ಡಿ. ಹುಮಂತಯ್ಯ, ಗುರುನಾಥ ರಡ್ಡಿ, ತಿಮ್ಮಣ್ಣಮೆಳ್ಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News