ಕೇರಳಕ್ಕೆ ನೀಡಲಿರುವ ಮೊತ್ತದ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ: ಯುಎಇ

Update: 2018-08-24 11:15 GMT

ಹೊಸದಿಲ್ಲಿ, ಆ.24: ಕೇರಳ ನೆರೆ ಪರಿಹಾರವಾಗಿ ಸಂಯುಕ್ತ ಅರಬ್ ಸಂಸ್ಥಾನವು ಘೋಷಿಸಿರುವ 700 ಕೋಟಿ ರೂ. ಸಹಾಯಧನ ಪಡೆಯುವ ಕುರಿತಂತೆ ಕೇಂದ್ರ ಸರಕಾರ ಹಾಗೂ ಕೇರಳದ ಸರಕಾರದ ನಡುವೆ ವಿವಾದ ಬಿಸಿಯೇರಿರುವಂತೆಯೇ ತಮ್ಮ ದೇಶ ಇಲ್ಲಿಯ ತನಕ ನೆರೆ ಪರಿಹಾರವಾಗಿ ಒಂದು ನಿರ್ದಿಷ್ಟ ಮೊತ್ತದ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ ಎಂದು ಸಂಯುಕ್ತ ಅರಬ್ ಸಂಸ್ಥಾನದ ರಾಯಭಾರಿ ಅಹ್ಮದ್ ಅಲ್ಬನ್ನಾ ಹೇಳಿದ್ದಾರೆ.

ಹಾಗಾದರೆ ಯುಎಇ 700 ಕೋಟಿ ರೂ. ಪರಿಹಾರ ಮೊತ್ತ ಘೋಷಿಸಿಲ್ಲವೇ ಎಂಬ ಪ್ರಶ್ನೆಗೆ ``ಹೌದು ಅದು ಸರಿ, ಇನ್ನೂ ಅಂತಿಮಗೊಂಡಿಲ್ಲ, ಯಾವುದೇ ಘೋಷಣೆಯಾಗಿಲ್ಲ,'' ಎಂದಿದ್ದಾರೆ.

``ಯುಎಇ ಉಪಾಧ್ಯಕ್ಷ, ಅಲ್ಲಿನ ಪ್ರಧಾನಿ ಹಾಗೂ ದುಬೈ ದೊರೆ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೌಮ್ ಅವರು ರಾಷ್ಟ್ರೀಯ ತುರ್ತು ಸಮಿತಿಯೊಂದನ್ನು ರಚಿಸಿದ್ದು,  ಕೇರಳಕ್ಕಾಗಿ ಅಗತ್ಯ ವಸ್ತುಗಳನ್ನು ಸಂಗ್ರಹಿಸುವ  ಕಾರ್ಯ ನಡೆದಿದೆ'' ಎಂದಿದ್ದಾರೆ.

``ವಿದೇಶಿ ಆರ್ಥಿಕ ಧನಸಹಾಯದ ಬಗೆಗಿನ ಭಾರತದಲ್ಲಿನ ನಿಯಮಗಳ ಬಗ್ಗೆ ನಮಗೆ ಅರಿವಿರುವುದರಿಮದ ಸಮಿತಿ ಸಂಬಂಧಿತ ಪ್ರಾಧಿಕಾರಗಳ ಜತೆ ಮಾತುಕತೆ ನಡೆಸುತ್ತಿದೆ. ತುರ್ತು ಅಗತ್ಯಗಳು ಹಾಗೂ ಆಹಾರ ವಸ್ತುಗಳನ್ನು ಪೂರೈಸುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ನಾವು ಯುಎಇಯ ರೆಡ್ ಕ್ರೆಸೆಂಟ್ ಹಾಗೂ ಕೇರಳದ ಮತ್ತು ಭಾರತದಲ್ಲಿರುವ ಹಲವು ಸಂಘಟನೆಗಳ ಜತೆ ಸಂಪರ್ಕದಲ್ಲಿದ್ದೇವೆ'' ಎಂದು ಅವರು ಹೇಳಿದ್ದಾರೆ.

ಕೇರಳಕ್ಕೆ ವಿದೇಶಿ ನೆರವನ್ನು ಅನುಮತಿಸುವಂತೆ ಕೇರಳ ಸರಕಾರ ಈಗಾಗಲೇ  ಕೇಂದ್ರ ಸರಕಾರವನ್ನು ವಿನಂತಿಸಿದೆ. ಪುನರ್ವಸತಿ  ಕಾರ್ಯಗಳಿಗೆ ವಿದೇಶಿ ನೆರವು ಪಡೆಯಬಹುದು ಎಂದು ರಾಜ್ಯ ವಿತ್ತ ಸಚಿವ ಥಾಮಸ್ ಐಸಾಕ್ ಹೇಳಿದರೆ ಕೇರಳದವರಾದ ಕೇಂದ್ರ ಸಚಿವ ಕೆ ಜೆ ಆಲ್ಫೋನ್ಸ್ ಕೂಡ ಕೇರಳಕ್ಕೆ ಸಂಬಂಧಿಸಿದಂತೆ ನಿಯಮಗಳಲ್ಲಿ ವಿನಾಯಿತಿ ನೀಡಬೇಕೆಂದು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News