×
Ad

ಬಿಬಿಎಂಪಿ: ಕಸದ ಸಮಸ್ಯೆ ನಿವಾರಣೆಗಾಗಿ ವೇಸ್ಟ್ ಟ್ರಾನ್ಸಫರ್ ಸ್ಟೇಷನ್ ನಿರ್ಮಾಣಕ್ಕೆ ಸಿದ್ಧತೆ

Update: 2018-08-24 22:18 IST

ಬೆಂಗಳೂರು, ಆ.24: ಬೆಂಗಳೂರು ನಗರದಲ್ಲಿ ತಲೆದೋರಿರುವ ಕಸದ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಬಿಬಿಎಂಪಿ ವತಿಯಿಂದ ಇಂದೋರ್ ಮಾದರಿಯಲ್ಲಿ ವೇಸ್ಟ್ ಟ್ರಾನ್ಸಫರ್ ಸ್ಟೇಷನ್ ನಿರ್ಮಿಸಲು ಸಿದ್ಧತೆ ನಡೆಸಿದ್ದು, ಪ್ರಾಯೋಗಿಕವಾಗಿ ಯಲಹಂಕ ಬಳಿಯ ಕುವೆಂಪು ನಗರ ವಾರ್ಡ್‌ನಲ್ಲಿ ಅಳವಡಿಸಲು ಮುಂದಾಗಿದೆ.

ಇಂದೋರ್ ಪ್ರಾಂತ್ಯವು ಇತ್ತೀಚಿಗೆ ನಡೆದ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ದೇಶದ ಮೊದಲ ಸ್ವಚ್ಛ ನಗರ ಎಂಬ ಕೀರ್ತಿಗೆ ಪಾತ್ರವಾಗಿತ್ತು. ಅಲ್ಲಿ ತ್ಯಾಜ್ಯ ವಿಲೇವಾರಿಗಾಗಿ ಟ್ರಾನ್ಸಫರ್ ಸ್ಟೇಷನ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಅದೇ ಮಾದರಿಯನ್ನು ನಗರದಲ್ಲಿ ಸ್ಥಾಪಿಸಲು ಬಿಬಿಎಂಪಿ ಮುಂದಾಗಿದ್ದು, ಈಗಾಗಲೇ ನಗರದ 50 ಸ್ಥಳಗಳಲ್ಲಿ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ ಹಾಗೂ ಒಂದು ವಾರ್ಡ್‌ನಲ್ಲಿ ಸ್ಥಾಪಿಸಲು ಸಿದ್ಧತೆ ನಡೆದಿದೆ.

ಬೆಂಗಳೂರು ನಗರದಲ್ಲಿ ದಿನನಿತ್ಯ ನಾಲ್ಕು ಸಾವಿರ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದರ ಸಂಸ್ಕರಣೆಗಾಗಿ ಏಳು ಸಂಸ್ಕರಣಾ ಘಟಕ, 4 ಕೋರೆಗಳನ್ನು ಗುರುತಿಸಲಾಗಿದೆ. ಹೀಗಿದ್ದರೂ, ವಿವಿಧ ಕಡೆಗಳಲ್ಲಿನ ಐದು ಘಟಕಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಅಲ್ಲದೆ, ಕೋರೆಗಳೂ ಒಂದೊಂದಾಗಿ ಭರ್ತಿಯಾಗುತ್ತಾ ಬರುತ್ತಿವೆ. ಆದುದರಿಂದಾಗಿ ತ್ಯಾಜ್ಯದ ಪ್ರಮಾಣ ಕಡಿಮೆ ಮಾಡಲು ಈ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

ಹೇಗೆ ಅಳವಡಿಸುವುದು: ಒಂದು ವಾರ್ಡ್‌ನಲ್ಲಿ ದೊಡ್ಡ ಕಂಟೇನರ್ ಅನ್ನು ಅಳವಡಿಸಲಾಗುತ್ತದೆ. ಅದರಲ್ಲಿ ಕಸವನ್ನು ಕ್ರಶ್ ಮಾಡಿ, ಲಿಚೆಟ್ ಅನ್ನು ಚರಂಡಿಗೆ ಬಿಡಲಾಗುತ್ತದೆ. ಅದರಿಂದ ಕಸದ ಪ್ರಮಾಣ ಕಡಿಮೆಯಾಗುತ್ತದೆ. ಅಲ್ಲದೆ, ರಸ್ತೆಗಳಲ್ಲಿ ಲಿಚೆಟ್ ಹರಿಯುವುದು ತಪ್ಪುತ್ತದೆ. ಅನಂತರ ಕಂಟೇನರ್ ಭರ್ತಿಯಾದ ಬಳಿಕ ಅದನ್ನು ಕಾಂಪ್ಯಾಕ್ಟರ್ ಮೂಲಕ ತೆಗೆದುಕೊಂಡು ಹೋಗಿ, ಆ ಜಾಗದಲ್ಲಿ ಮತ್ತೊಂದು ಖಾಲಿ ಕಂಟೇನರ್ ಕೂರಿಸಲಾಗುತ್ತದೆ. ಈ ಯೋಜನೆಗಾಗಿ 279 ಕೋಟಿ ರೂ. ವ್ಯಯಿಸಲಾಗುತ್ತಿದ್ದು, ನಿರ್ವಹಣೆಗೆ 196.34 ಕೋಟಿ ರೂ. ಹಾಗೂ 50 ಕಡೆ ಟ್ರಾನ್ಸಫರ್ ಸ್ಟೇಷನ್ ನಿರ್ಮಾಣ ಹಾಗೂ ಯಂತ್ರೋಪಕರಣ ಖರೀದಿಗಾಗಿ 82.84 ಕೋಟಿ ರೂ. ವೆಚ್ಚ ಮಾಡಲು ಪಾಲಿಕೆ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News