ಕೊಡಗು ಜಿಲ್ಲೆಗೆ 1 ಕೋಟಿ ರೂ.ನೆರವು ಘೋಷಿಸಿದ ವಿ.ಪರಿಷತ್ ಸದಸ್ಯ ಲೇಹರ್ ಸಿಂಗ್
ಬೆಂಗಳೂರು, ಆ.24: ಕೊಡಗು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಉಂಟಾಗಿರುವ ಅನಾಹುತಗಳ ಪರಿಹಾರ ಕಾರ್ಯಾಚರಣೆಗೆ ವಿಧಾನಪರಿಷತ್ ಸದಸ್ಯರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಒಂದು ಕೋಟಿ ರೂ.ಗಳ ನೆರವು ನೀಡುವುದಾಗಿ ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಲೇಹರ್‌ಸಿಂಗ್ ಘೋಷಿಸಿದ್ದಾರೆ.
ಶುಕ್ರವಾರ ಮುಖ್ಯಮಂತ್ರಿಯ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನಲ್ಲಿ ವರುಣನ ಆರ್ಭಟದಿಂದ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿದೆ. ಅವರ ಸಂಕಷ್ಟಕ್ಕೆ ನೆರವು ನೀಡಲು ನನ್ನ ವಿಧಾನಪರಿಷತ್ತಿನ ಸ್ಥಳೀಯ ಕ್ಷೇತ್ರಾಭಿವೃದ್ಧಿಯಿಂದ ಒಂದು ಕೋಟಿ ರೂ.ಗಳನ್ನು ನೀಡುತ್ತಿದ್ದೇನೆ ಎಂದರು.
ಕೊಡಗು ಜಿಲ್ಲಾಡಳಿತದ ಮೂಲಕ ಪರಿಹಾರ ಕಾರ್ಯಗಳಿಗೆ ಹಣಕಾಸಿನ ನೆರವನ್ನು ಶಾಸಕರ ನಿಧಿಯಿಂದ ನೀಡಲಾಗುತ್ತಿದೆ. ಅಗತ್ಯವಿದ್ದಲ್ಲಿ ವೈಯಕ್ತಿಕವಾಗಿಯೂ ನೆರವು ನೀಡುತ್ತೇನೆ. ಕೊಡಗು ಜಿಲ್ಲೆಯನ್ನು ಮತ್ತೆ ನಿರ್ಮಾಣ ಮಾಡಲು ನಮ್ಮಿಂದ ಆಗಬಹುದಾದ ಸಹಕಾರ ನೀಡಲು ಸಿದ್ಧ ಎಂದು ಲೇಹರ್‌ಸಿಂಗ್ ತಿಳಿಸಿದರು.
ನಮ್ಮಂತೆಯೆ ಆ ಭಾಗದ ಜನಪ್ರತಿನಿಧಿಗಳು ತಮ್ಮ ಶಾಸಕರು, ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಹಣಕಾಸಿನ ನೆರವು ನೀಡುವಂತೆ ಮನವಿ ಮಾಡಿದ ಅವರು, ಮಳೆ ಹಾನಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದ್ದೇನೆ ಎಂದರು.
ದೇಶದ ಗಡಿ ಕಾಯುವ ಸೈನಿಕರನ್ನು ನೀಡಿದ ಜಿಲ್ಲೆ ಕೊಡಗು. ಅಂತಹ ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಸಾವಿರಾರು ಜನ ಸಂತ್ರಸ್ತರಾಗಿದ್ದಾರೆ. ಅವರಿಗೆ ಪುನವರ್ಸತಿ ಕಲ್ಪಿಸುವ ಯೋಜನೆಗೆ ಅಗತ್ಯ ನೆರವು ನೀಡಲು ಸಿದ್ಧವಿರುವುದಾಗಿ ಮುಖ್ಯಮಂತ್ರಿಗೆ ಹೇಳಿದ್ದು, ನನ್ನ ಮನವಿಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಲೇಹರ್‌ಸಿಂಗ್ ಹೇಳಿದರು.