ಪೆಟ್ರೋಲ್ ಬಂಕ್ ಗಳಲ್ಲಿ ಮೋದಿ ಬ್ಯಾನರ್ ಹಾಕದಿದ್ದರೆ ತೈಲ ಪೂರೈಕೆ ನಿಲ್ಲಿಸುವ ಬೆದರಿಕೆ: ಆರೋಪ

Update: 2018-08-25 10:41 GMT

ಹೊಸದಿಲ್ಲಿ, ಆ.25: ಪೆಟ್ರೋಲ್ ಬಂಕ್ ಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯ ಚಿತ್ರ ಹಾಕಬೇಕೆಂದು ಸಾರ್ವಜನಿಕ ರಂಗದ ತೈಲ ಕಂಪೆನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಶನ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಎಲ್ಲಾ ಪೆಟ್ರೋಲ್ ವಿತರಕರಿಗೂ ಮೌಖಿಕ ಸೂಚನೆ ನೀಡಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ ಎಂದು thehindu.com ವರದಿ ಮಾಡಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ಸೂಚನೆ ಪಾಲಿಸಲು ನಿರಾಕರಿಸಿದವರಿಗೆ ತೈಲ ಪೂರೈಕೆ ನಿಲ್ಲಿಸುವ ಬೆದರಿಕೆಯೊಡ್ಡಲಾಗಿದೆ ಎಂದು ಕನ್ಸಾರ್ಟಿಯಂ ಆಫ್ ಇಂಡಿಯನ್ ಪೆಟ್ರೋಲ್ ಡೀಲರ್ಸ್  ಅಧ್ಯಕ್ಷ ಎಸ್. ಎಸ್. ಗೋಗಿ ಆರೋಪಿಸಿದ್ದಾರೆ.

ಪೆಟ್ರೋಲ್ ಬಂಕ್ ಗಳಿಗೆ ಭೇಡಿ ನೀಡುವ ತೈಲ ಕಂಪೆನಿಗಳ ಪ್ರಾದೇಶಿಕ ಅಧಿಕಾರಿಗಳು ಈ ಸೂಚನೆ ನೀಡಿದ್ದಾರೆನ್ನಲಾಗಿದ್ದು, ಬಿಪಿಎಲ್ ಕುಟುಂಬಗಳಿಗೆ ನೀಡಲಾಗುವ ಎಲ್ ಪಿಜಿಒ ಸಂಪರ್ಕಕ್ಕೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಹೋರ್ಡಿಂಗ್ ಅಳವಡಿಸುವಂತೆ ಹೇಳಲಾಗಿದೆಯೆನ್ನಲಾಗಿದೆ. ಆದರೆ ಇಲ್ಲಿಯವರೆಗೆ ಈ ನಿಟ್ಟಿನಲ್ಲಿ ಯಾವುದೇ ಲಿಖಿತ ಸೂಚನೆ ದೊರೆತಿಲ್ಲವೆನ್ನಲಾಗಿದೆ.

ಇತ್ತೀಚೆಗೆ ತೈಲ ಕಂಪೆನಿಗಳು ಪೆಟ್ರೋಲ್ ಬಂಕುಗಳಲ್ಲಿ ಕೆಲಸ ಮಾಡುವ  10 ಲಕ್ಷಕ್ಕೂ ಅಧಿಕ ಉದ್ಯೋಗಿಗಳ ಜಾತಿ, ಧರ್ಮ ಸೇರಿದಂತೆ ಹಲವಾರು ಮಾಹಿತಿಗಳನ್ನು ಕೋರಿದ್ದರೂ ಪೆಟ್ರೋಲ್ ವಿತರಕರು ಅದಕ್ಕೆ ನಿರಾಕರಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News